ADVERTISEMENT

₹4 ಲಕ್ಷ ಕೋಟಿ ಹೂಡಿಕೆ: ಇಂಡಿಯನ್‌ ಆಯಿಲ್‌

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 15:32 IST
Last Updated 25 ಆಗಸ್ಟ್ 2023, 15:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಇಂಡಿಯನ್‌ ಆಯಿಲ್‌ ಕಂಪನಿಯು ಇಂಧನ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್‌ ವಹಿವಾಟು ವಿಸ್ತರಣೆ ಹಾಗೂ ನವೀಕರಿಸಬಲ್ಲ ಇಂಧನ ಯೋಜನೆಗಳಿಗಾಗಿ ಈ ದಶಕದಲ್ಲಿ ₹4 ಲಕ್ಷ ಕೋಟಿ ಹೂಡಿಕೆ ಮಾಡಲು ಮುಂದಾಗಿದೆ ಎಂದು ಕಂಪನಿಯ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ಶುಕ್ರವಾರ ತಿಳಿಸಿದ್ದಾರೆ.

ಇಂಧನ ಸಂಸ್ಕರಣೆ ಸಾಮರ್ಥ್ಯ ಹೆಚ್ಚಿಸಲು ಮತ್ತು ಕಚ್ಚಾ ತೈಲವನ್ನು ಇಂಧನವನ್ನಾಗಿ ಪರಿವರ್ತಿಸುವ ವಹಿವಾಟಿನ ವಿಸ್ತರಣೆಗಾಗಿ ₹1 ಲಕ್ಷ ಕೋಟಿ ಹೂಡಿಕೆ ಮಾಡಲು ಕಂಪನಿ ಉದ್ದೇಶಿಸಿದೆ. ಇಂಗಾಲ ಉಗುಳುವುದನ್ನು ಶೂನ್ಯ ಮಟ್ಟಕ್ಕೆ ತಗ್ಗಿಸುವ ಯೋಜನೆಗಳಿಗೆ ₹2.4 ಲಕ್ಷ ಕೋಟಿ ಹಾಗೂ ₹60 ಸಾವಿರ ಕೋಟಿಯನ್ನು ಒಡಿಶಾದಲ್ಲಿ ಪೆಟ್ರೋಕೆಮಿಕಲ್‌ ಘಟಕ ಸ್ಥಾಪಿಸಲು ತೊಡಗಿಸಲು ಕಂಪನಿಯು ಯೋಜನೆ ರೂಪಿಸಿದೆ.

ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಯ ಇಂಧನದ ಅಗತ್ಯಗಳನ್ನು ಈಡೇರಿಸಲು ಈ ಹೂಡಿಕೆಗಳು ನೆರವಾಗಲಿವೆ. ಅಲ್ಲದೆ, ನವೀಕರಿಸಬಲ್ಲ ಇಂಧನ ಬಳಕೆಯ ಹಾದಿಯಲ್ಲಿ ಸಾಗಲು ಸಹ ಅನುಕೂಲ ಮಾಡಿಕೊಡಲಿವೆ ಎಂದು ಶ್ರೀಕಾಂತ್ ಅವರು ಕಂಪನಿಯ ವಾರ್ಷಿಕ ಸಭೆಯಲ್ಲಿ ತಿಳಿಸಿದ್ದಾರೆ.

ADVERTISEMENT

ದೇಶದ ಇಂಧನ ಮಾರುಕಟ್ಟೆಯಲ್ಲಿ ಶೇ 40ಕ್ಕೂ ಹೆಚ್ಚಿನ ಪಾಲನ್ನು ಇಂಡಿಯನ್‌ ಆಯಿಲ್‌ ಹೊಂದಿದೆ.

ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಸ್ವ್ಯಾಪ್‌ ಮಾಡಲು ಅನುಕೂಲ ಆಗುವಂತೆ ಇ.ವಿ. ಚಾರ್ಜಿಂಗ್‌ ಜಾಲ ಮತ್ತು ಮೂಲಸೌಕರ್ಯ ರೂಪಿಸುವುದು ಸಹ ಹೂಡಿಕೆ ಯೋಜನೆಯ ಭಾಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.