ADVERTISEMENT

ಕೋವಿಡ್-19: ಕರಗಿದ ಕುಬೇರರ ಸಂಪತ್ತು

ಡಿಮಾರ್ಟ್‌ನ ದಮಾನಿ ದೇಶದ 2ನೇ ಅತಿದೊಡ್ಡ ಶ್ರೀಮಂತ

​ಪ್ರಜಾವಾಣಿ ವಾರ್ತೆ
Published 7 ಮೇ 2020, 19:30 IST
Last Updated 7 ಮೇ 2020, 19:30 IST
ಜೆಫ್‌ ಬಿಜೋಸ್‌
ಜೆಫ್‌ ಬಿಜೋಸ್‌   

ಬೆಂಗಳೂರು: ಕುಂಠಿತ ಆರ್ಥಿಕ ಪ್ರಗತಿ ಜತೆ ಕೋವಿಡ್‌ ದಿಗ್ಬಂಧನದ ಪ್ರತಿಕೂಲ ಪರಿಣಾಮಗಳಿಂದಾಗಿ ದೇಶದ ಆಗರ್ಭ ಶ್ರೀಮಂತರ ಸಂಖ್ಯೆ ಮತ್ತು ಅವರ ಪಾಲಿನ ಸಂಪತ್ತಿನ ಪ್ರಮಾಣವು ಈ ವರ್ಷ ಕಡಿಮೆಯಾಗಿದೆ.

ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಎನ್ನುವ ಹೆಗ್ಗಳಿಕೆಯನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಉಳಿಸಿಕೊಂಡಿದ್ದಾರೆ. ವರ್ಷದ ಹಿಂದಿನ ಸಂಪತ್ತಿಗೆ ಹೋಲಿಸಿದರೆ ₹ 99 ಸಾವಿರ ಕೋಟಿ ಕಡಿಮೆಯಾಗಿದ್ದರೂ, ₹ 2.76 ಲಕ್ಷ ಕೋಟಿ ಮೊತ್ತದ ನಿವ್ವಳ ಸಂಪತ್ತಿನೊಂದಿಗೆ ಇವರು ಮೊದಲ ಸ್ಥಾನದಲ್ಲಿ ಇದ್ದಾರೆ.

ಅನೇಕ ಪ್ರತಿಕೂಲತೆಗಳ ಮಧ್ಯೆ, ಡಿಮಾರ್ಟ್‌ ಸೂಪರ್‌ಮಾರ್ಕೆಟ್‌ನ ಮಾಲೀಕ ರಾಧಾಕಿಷನ್‌ ದಮಾನಿ ಅವರ ಸಂಪತ್ತು ಹೆಚ್ಚಳಗೊಂಡು ₹ 1.03 ಲಕ್ಷ ಕೋಟಿಗೆ ತಲುಪಿದೆ. ಹೀಗಾಗಿ ಅವರು ದೇಶದ ಎರಡನೇ ಅತ್ಯಂತ ಸಿರಿವಂತ ಉದ್ಯಮಿಯಾಗಿದ್ದಾರೆ.

ADVERTISEMENT

12 ಹೊಸಬರ ಸೇರ್ಪಡೆ: ಕುಬೇರರ ಒಟ್ಟು ಸಂಖ್ಯೆ ಕಡಿಮೆಯಾಗಿದ್ದರೂ, 12 ಹೊಸ ಕುಬೇರರು ದೇಶಿ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಶಿಕ್ಷಣ – ತಂತ್ರಜ್ಞಾನದ ನವೋದ್ಯಮ ಸ್ಥಾಪಕ ಬೈಜು ರವೀಂದ್ರನ್‌ (39) ಅವರು ₹ 13,500 ಕೋಟಿ ಸಂಪತ್ತಿನ ಒಡೆಯರಾಗಿ ಕುಬೇರರ ಪಟ್ಟಿಗೆ ಸೇರಿದ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ.

ಫೋರ್ಬ್ಸ್‌ ನಿಯತಕಾಲಿಕೆ ಪ್ರಕಾರ, 2019ರಲ್ಲಿದ್ದ 106 ಕುಬೇರರ ಸಂಖ್ಯೆ 2020ರ ಮಾರ್ಚ್‌ ಕೊನೆ ವಾರದಲ್ಲಿ 102ಕ್ಕೆ ಇಳಿದಿದೆ. ಈ ಎಲ್ಲ ಸಿರಿವಂತರ ಒಟ್ಟು ಸಂಪತ್ತು ಶೇ 23ರಷ್ಟು ಕಡಿಮೆಯಾಗಿ ₹ 23.47 ಲಕ್ಷ ಕೋಟಿಗೆ ಇಳಿದಿದೆ. ವಿಪ್ರೊದ ಅಜೀಂ ಪ್ರೇಮ್‌ಜಿ ಅವರು ಕಂಪನಿಯಲ್ಲಿನ ತಮ್ಮ ದೊಡ್ಡ ಪಾಲನ್ನು ತಮ್ಮ ಶಿಕ್ಷಣ ಫೌಂಡೇಷನ್‌ಗೆ ದಾನವಾಗಿ ನೀಡಿರುವುದೂ ಶ್ರೀಮಂತರ ಒಟ್ಟು ಸಂಪತ್ತು ಕಡಿಮೆಯಾಗಲು ಕಾರಣವಾಗಿದೆ.

ವಿಶ್ವ ಕುಬೇರರ ಶೇ 51ರಷ್ಟು ಸಂಪತ್ತು ನಷ್ಟ
ವಿಶ್ವದ ಅತ್ಯಂತ ಸಿರಿವಂತರೂ ಕೋವಿಡ್‌ ಪಿಡುಗಿನಿಂದ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದಾರೆ. ಯುರೋಪ್‌, ಅಮೆರಿಕದಲ್ಲಿ ಕೋವಿಡ್‌ ಪಿಡುಗು ವ್ಯಾಪಕವಾಗಿ ಹರಡಿದ್ದರಿಂದ ಜಾಗತಿಕ ಷೇರುಪೇಟೆಗಳ ವಹಿವಾಟು ಕುಸಿದಿದೆ. ಇದರಿಂದ ಜಾಗತಿಕ ಕುಬೇರರ ಸಂಪತ್ತು ಕರಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮಾರ್ಚ್‌ 18ರ ವೇಳೆಗೆ ಶೇ 51ರಷ್ಟು ಕುಬೇರರ ಸಂಪತ್ತು ಕರಗಿದೆ. ಒಟ್ಟಾರೆ ₹ 52.50 ಲಕ್ಷ ಕೋಟಿ ಮೊತ್ತದ ಸಂಪತ್ತು ಕಡಿಮೆಯಾಗಿ ಒಟ್ಟು ಸಂಪತ್ತು ₹ 600 ಲಕ್ಷ ಕೋಟಿಗೆ ತಲುಪಿದೆ.

ಅಮೆಜಾನ್‌ ಸಿಇಒ ಜೆಫ್‌ ಬಿಜೊಸ್‌ ಸತತ ಮೂರನೇ ವರ್ಷವೂ ವಿಶ್ವದ ಅತ್ಯಂತ ಸಿರಿವಂತ ಸ್ಥಾನ ಉಳಿಸಿಕೊಂಡಿದ್ದಾರೆ. ವಿವಾಹ ವಿಚ್ಛೇದನ ಇತ್ಯರ್ಥದ ರೂಪದಲ್ಲಿ ಮಾಜಿ ಪತ್ನಿಗೆ ₹ 2.70 ಲಕ್ಷ ಕೋಟಿ ಮೊತ್ತದ ಅಮೆಜಾನ್‌ ಷೇರುಗಳನ್ನು ನೀಡಿರುವುದರ ಹೊರತಾಗಿಯೂ ಅವರ ಸಂಪತ್ತು ₹ 8.47 ಲಕ್ಷ ಕೋಟಿಗಳಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.