ADVERTISEMENT

ಆರ್‌ಬಿಐ ತೀರ್ಮಾನ ಕುರಿತು ಎಸ್‌ಆ್ಯಂಡ್‌ಪಿ ಅಂದಾಜು: 2024ರಲ್ಲಿ ರೆಪೊ ದರ ಇಳಿಕೆ?

ರಾಯಿಟರ್ಸ್
Published 26 ಜೂನ್ 2023, 15:58 IST
Last Updated 26 ಜೂನ್ 2023, 15:58 IST
ಆರ್‌ಬಿಐ
ಆರ್‌ಬಿಐ   

ಮುಂಬೈ/ನವದೆಹಲಿ: ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 4ಕ್ಕೆ ತಗ್ಗಿದ ನಂತರದಲ್ಲಿ, 2024ರ ಆರಂಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ರೇಟಿಂಗ್ಸ್ ಅಂದಾಜಿಸಿದೆ.

ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4.25ಕ್ಕೆ ತಗ್ಗಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಕಳೆದ ವರ್ಷದ ಮೇ ತಿಂಗಳ ನಂತರದಲ್ಲಿ ರೆಪೊ ದರವನ್ನು 250 ಮೂಲಾಂಶಗಳಷ್ಟು ಹೆಚ್ಚಿಸಿದೆ. ಈ ವರ್ಷದ ಇನ್ನುಳಿದ ಅವಧಿಗೆ ಸಮಿತಿಯು ರೆಪೊ ದರವನ್ನು ಇನ್ನಷ್ಟು ಹೆಚ್ಚಿಸಲಿಕ್ಕಿಲ್ಲ ಎಂಬ ನಿರೀಕ್ಷೆ ಇದೆ.

ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣ ಹಾಗೂ ರೆಪೊ ದರವು ಗರಿಷ್ಠ ಮಟ್ಟವನ್ನು ಮುಟ್ಟಿಯಾಗಿದೆ ಎಂದು ಎಸ್‌ಆ್ಯಂಡ್‌ಪಿ ಹೇಳಿದೆ. ಹಣದುಬ್ಬರ ಪ್ರಮಾಣವು ಈ ಆರ್ಥಿಕ ವರ್ಷದಲ್ಲಿ ಸರಾಸರಿ ಶೇ 5ರಷ್ಟು, ಜಿಡಿಪಿ ಬೆಳವಣಿಗೆ ದರವು ಶೇ 6ರಷ್ಟು ಆಗಲಿದೆ ಎಂದು ಎಸ್‌ಆ್ಯಂಡ್‌ಪಿ ಅಂದಾಜು ಮಾಡಿದೆ.

ADVERTISEMENT

ಆರ್‌ಬಿಐ ಪ್ರಸಕ್ತ ಹಣಕಾಸು ವರ್ಷದಲ್ಲಿ ರೆಪೊ ದರವನ್ನು 25 ಮೂಲಾಂಶಗಳಷ್ಟು ಕಡಿಮೆ ಮಾಡಲಿದೆ. ಆಗ ರೆಪೊ ದರವು ಶೇ 6.25ಕ್ಕೆ ತಗ್ಗುತ್ತದೆ. ಮಾರ್ಚ್‌ ಅಂತ್ಯದ ವೇಳೆಗೆ ಇದು ಸಾಧ್ಯವಾಗಬಹುದು. 2024–25ರಲ್ಲಿ ರೆಪೊ ದರವನ್ನು ಆರ್‌ಬಿಐ ಇನ್ನೂ 100 ಮೂಲಾಂಶಗಳಷ್ಟು ಕಡಿಮೆ ಮಾಡಬಹುದು ಎಂದು ಎಸ್‌ಆ್ಯಂಡ್‌ಪಿ ಅಂದಾಜು ಮಾಡಿದೆ. ಸಾಲದ ಮೇಲಿನ ಬಡ್ಡಿ ದರ ಹಾಗೂ ರೆಪೊ ದರದ ನಡುವೆ ನೇರ ನಂಟು ಇದೆ.

ಈ ವರ್ಷದಲ್ಲಿ ಭಾರತವು ಏಷ್ಯಾ–ಪೆಸಿಫಿಕ್ ಪ್ರದೇಶದಲ್ಲಿ ಅತ್ಯಂತ ವೇಗದ ಆರ್ಥಿಕ ಪ್ರಗತಿಯನ್ನು ಕಾಣಲಿದೆ ಎಂದು ಸಂಸ್ಥೆಯು ಅಂದಾಜು ಮಾಡಿದೆ. ಸಂಸ್ಥೆಯು ಚೀನಾದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ 5.2ಕ್ಕೆ ತಗ್ಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.