ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ.
ವರ್ಷಕ್ಕೆ ₹ 1 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿದ ತೆರಿಗೆದಾರರ ಸಂಖ್ಯೆಯು 48,416 ರಿಂದ 81,344ಕ್ಕೆ ತಲುಪಿದ್ದು, ಶೇ 68ರಷ್ಟು ಹೆಚ್ಚಳ ದಾಖಲಿಸಿದೆ.
ಕಾರ್ಪೊರೇಟ್‌ಗಳು, ಇತರೆ ಸಂಸ್ಥೆಗಳು, ಹಿಂದೂ ಅವಿಭಕ್ತ ಕುಟುಂಬ ಮತ್ತು ವ್ಯಕ್ತಿಗಳು ಒಳಗೊಂಡಂತೆ 88,649 ತೆರಿಗೆದಾರರ ಆದಾಯವು 2014–15ರಲ್ಲಿ ₹ 1 ಕೋಟಿಗಿಂತ ಹೆಚ್ಚಿಗೆ ಇತ್ತು. 4 ವರ್ಷಗಳಲ್ಲಿ ಈ ಕೋಟ್ಯಧಿಪತಿಗಳ ಸಂಖ್ಯೆ 1.40 ಲಕ್ಷಕ್ಕೆ ತಲುಪಿದೆ. ಈ ಅವಧಿಯಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯು ಶೇ 60ರಷ್ಟು ಏರಿಕೆಯಾಗಿರುವುದನ್ನು ಇದು ಸೂಚಿಸುತ್ತದೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ತಿಳಿಸಿದೆ. ಮಂಡಳಿಯು ಬಿಡುಗಡೆ ಮಾಡಿರುವ ನಾಲ್ಕು ವರ್ಷಗಳಲ್ಲಿ ಸಲ್ಲಿಕೆಯಾದ ಆದಾಯ ಮತ್ತು ನೇರ ತೆರಿಗೆಯ ವಿವರಗಳನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ.
‘ತೆರಿಗೆ ಇಲಾಖೆಯು ನಾಲ್ಕು ವರ್ಷಗಳಲ್ಲಿ ಕೈಗೊಂಡ ಕಾನೂನು, ಆಡಳಿತ, ಮಾಹಿತಿ ಮತ್ತು ಜಾರಿ ಪ್ರಯತ್ನಗಳ ಫಲವಾಗಿ ತೆರಿಗೆದಾರರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ’ ಎಂದು ‘ಸಿಬಿಡಿಟಿ’ ಅಧ್ಯಕ್ಷ ಸುಶೀಲ್‌ಚಂದ್ರ ಹೇಳಿದ್ದಾರೆ.
ಐ.ಟಿ ರಿಟರ್ನ್ಸ್: ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐ.ಟಿ ರಿಟರ್ನ್ಸ) ಸಲ್ಲಿಸಿದವರ ಸಂಖ್ಯೆಯಲ್ಲಿಯೂ ಶೇ 80ರಷ್ಟು ಹೆಚ್ಚಳ ಕಂಡು ಬಂದಿದೆ.
2013–14ರಲ್ಲಿ 3.79 ಕೋಟಿ ತೆರಿಗೆದಾರರು ರಿಟರ್ನ್ ಸಲ್ಲಿಸಿದ್ದರೆ, 2017–18ರಲ್ಲಿ ಇದು 6.85 ಕೋಟಿಗೆ ಏರಿಕೆಯಾಗಿದೆ. ಇದನ್ನು ಲೆಕ್ಕಹಾಕಲು 2014–15ನೇ ವರ್ಷವನ್ನು ಮೂಲ ವರ್ಷ ಎಂದು ಪರಿಗಣಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.