ADVERTISEMENT

ಅರ್ಥ ವ್ಯವಸ್ಥೆ ಶೇಕಡ 12ರಷ್ಟು ಬೆಳವಣಿಗೆ: ಮೂಡಿಸ್ ಅನಾಲಿಟಿಕ್ಸ್ ಅಂದಾಜು

ಮೂಡಿಸ್ ಅನಾಲಿಟಿಕ್ಸ್ ಅಂದಾಜು

ಪಿಟಿಐ
Published 19 ಮಾರ್ಚ್ 2021, 13:50 IST
Last Updated 19 ಮಾರ್ಚ್ 2021, 13:50 IST

ನವದೆಹಲಿ: ದೇಶದ ಅರ್ಥ ವ್ಯವಸ್ಥೆಯು 2021ರಲ್ಲಿ ಶೇಕಡ 12ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ ಎಂದು ಮೂಡಿಸ್‌ ಅನಾಲಿಟಿಕ್ಸ್‌ ಹೇಳಿದೆ.

ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅರ್ಥ ವ್ಯವಸ್ಥೆಯು ಶೇ (–)7.5ರಷ್ಟು ಕುಸಿತ ಕಂಡಿತ್ತು. ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ ಅರ್ಥ ವ್ಯವಸ್ಥೆಯು ಶೇ 0.4ರಷ್ಟು ಬೆಳವಣಿಗೆ ಕಂಡಿದೆ. ಈ ಚೇತರಿಕೆಯು ದೇಶದ ಜಿಡಿಪಿ ಬೆಳವಣಿಗೆ ಹೆಚ್ಚುವ ನಿರೀಕ್ಷೆ ಉಂಟುಮಾಡಿದೆ ಎಂದು ಮೂಡಿಸ್ ಹೇಳಿದೆ.

ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಗೊಳಿಸಲು ಆರಂಭಿಸಿದ ನಂತರ ದೇಶಿ ಮಾರುಕಟ್ಟೆಯಲ್ಲಿ ಹಾಗೂ ವಿದೇಶಗಳ ಮಾರುಕಟ್ಟೆಗಳಲ್ಲಿ ಬೇಡಿಕೆಯು ಚೇತರಿಕೆ ಕಾಣುತ್ತಿದೆ. ಇದರಿಂದಾಗಿ ಈಚಿನ ತಿಂಗಳುಗಳಲ್ಲಿ ತಯಾರಿಕೆಯು ಹೆಚ್ಚಳ ಆಗಿದೆ. ‘ಖಾಸಗಿ ವಲಯಗಳಿಂದ ಬರುವ ಬೇಡಿಕೆಗಳು, ವಿದೇಶಿ ಮೂಲದಿಂದ ಬರುವ ಹೂಡಿಕೆಗಳು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಏರಿಕೆ ಕಾಣಲಿವೆ ಎಂಬುದು ನಮ್ಮ ನಿರೀಕ್ಷೆ. ಇದು 2021ರಲ್ಲಿ ಆಂತರಿಕವಾಗಿ ಬೇಡಿಕೆ ಹೆಚ್ಚಳವಾಗುವುದಕ್ಕೆ ನೆರವಾಗಲಿದೆ’ ಎಂದು ಮೂಡಿಸ್ ಅಭಿಪ್ರಾಯ ವ್ಯಕ್ತಪಡಿಸಿದೆ.

ADVERTISEMENT

ಹಣಕಾಸು ಹಾಗೂ ಆರ್ಥಿಕ ನೀತಿಗಳು ಬೆಳವಣಿಗೆಗೆ ಪೂರಕವಾಗಿ ಇರಲಿವೆ ಎಂದು ಅದು ಅಂದಾಜಿಸಿದೆ. ‘ರೆಪೊ ದರವು ಈಗ ಶೇ 4ರಷ್ಟು ಇದೆ. ಈ ವರ್ಷದಲ್ಲಿ ರೆಪೊ ದರವು ಈ ಮಟ್ಟಕ್ಕಿಂತ ಕಡಿಮೆ ಬರುವ ನಿರೀಕ್ಷೆಯನ್ನು ನಾವು ಹೊಂದಿಲ್ಲ’ ಎಂದು ಮೂಡಿಸ್ ಹೇಳಿದೆ. ಆದಾಯ ತೆರಿಗೆ ಪ್ರಮಾಣವನ್ನು ತಗ್ಗಿಸುವಂತಹಆರ್ಥಿಕ ಉತ್ತೇಜನದ ನೇರ ಕ್ರಮಗಳು ಈಗಿನ ಪರಿಸ್ಥಿತಿಯಲ್ಲಿ ಜಾರಿಗೆ ಬರಲಿಕ್ಕಿಲ್ಲ ಎಂದು ಅದು ಭವಿಷ್ಯ ನುಡಿದಿದೆ.

2021ರಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಇರುವ ಪ್ರಮುಖ ಸವಾಲು ಕೋವಿಡ್‌–19ರ ಎರಡನೆಯ ಅಲೆ ಎಂದು ಸಂಸ್ಥೆ ಎಚ್ಚರಿಸಿದೆ. ‘ಆದರೆ ಕೋವಿಡ್‌–19 ಪ್ರಕರಣಗಳು ಮತ್ತೆ ಹೆಚ್ಚುತ್ತಿರುವುದು ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುವಂತೆ ಕಾಣುತ್ತಿರುವುದು ಸಮಾಧಾನಕರ. ಪರಿಸ್ಥಿತಿ ಹದಗೆಟ್ಟರೆ ರಾಜ್ಯ ಸರ್ಕಾರಗಳು ಸೀಮಿತ ಪ್ರದೇಶದಲ್ಲಿ ಮಾತ್ರ ಕರ್ಫ್ಯೂನಂತಹ ಕ್ರಮಗಳನ್ನು ಜಾರಿಗೊಳಿಸಬಹುದು ಎಂಬುದು ನಮ್ಮ ಲೆಕ್ಕಾಚಾರ’ ಎಂದು ಮೂಡಿಸ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.