ನವದೆಹಲಿ/ ಹೈದರಾಬಾದ್: ‘ಎವರೆಸ್ಟ್ ಮಸಾಲೆ ಪದಾರ್ಥಗಳು ಬಳಕೆಗೆ ಸುರಕ್ಷಿತವಾಗಿದ್ದು, ಗುಣಮಟ್ಟದಿಂದ ಕೂಡಿವೆ. ಹಾಗಾಗಿ, ಗ್ರಾಹಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ’ ಎಂದು ಎವರೆಸ್ಟ್ ಫುಡ್ ಪ್ರಾಡೆಕ್ಟ್ಸ್ ಪ್ರೈವೆಟ್ ಲಿಮಿಟೆಡ್ ಸ್ಪಷ್ಟಪಡಿಸಿದೆ.
ಭಾರತೀಯ ಮಸಾಲೆ ಮಂಡಳಿಯ ಪ್ರಯೋಗಾಲಯದಲ್ಲಿ ಕಂಪನಿಯ ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಲ್ಲಿ ಅನುಮತಿ ದೊರೆತ ಬಳಿಕವೇ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಕಂಪನಿಯ ನಿರ್ದೇಶಕ ರಾಜೀವ್ ಶಾ ಹೇಳಿದ್ದಾರೆ.
ಕಂಪನಿಯು ಉತ್ಪಾದಿಸುವ 60 ಪದಾರ್ಥಗಳ ಪೈಕಿ ಫಿಶ್ ಕರ‍್ರಿ ಮಸಾಲೆಯನ್ನು ಮಾತ್ರವೇ ಸಿಂಗಪುರದಲ್ಲಿ ಪರಿಶೀಲಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಸಿಂಗಪುರದಲ್ಲಿ ಕಂಪನಿಯ ಪದಾರ್ಥಗಳ ಬಳಕೆಗೆ ನಿಷೇಧ ಹೇರಿಲ್ಲ. ಹಾಂಗ್‌ಕಾಂಗ್‌ನ ಎಚ್ಚರಿಕೆ ಸಂದೇಶದ ಮೇರೆಗೆ ಮುಂದಿನ ಹಂತದ ಪರಿಶೀಲನೆಗಾಗಿ ತಾತ್ಕಾಲಿಕವಾಗಿ ಮಾರಾಟಕ್ಕೆ ತಡೆ ನೀಡಲಾಗಿದೆ’ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಎವರೆಸ್ಟ್ ಮಸಾಲೆ ಉತ್ಪನ್ನಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ಏಷ್ಯಾ, ಆಫ್ರಿಕಾ. ಯುರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪೂರೈಕೆಯಾಗುತ್ತವೆ.
ಎಂಡಿಎಚ್ ಹಾಗೂ ಎವರೆಸ್ಟ್ ಬ್ರ್ಯಾಂಡ್‌ನ ನಾಲ್ಕು ಮಸಾಲೆ ಉತ್ಪನ್ನಗಳಲ್ಲಿ ಎಥಿಲಿನ್ ಆಕ್ಸೈಡ್ ಎಂಬ ಕೀಟನಾಶಕ ಅಂಶ ಪತ್ತೆಯಾಗಿದ್ದು, ಅವು ಕ್ಯಾನ್ಸರ್ ಅಪಾಯವನ್ನು ಹೊಂದಿದೆ ಎಂದು ಆರೋಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.