ADVERTISEMENT

ಜುಲೈನಲ್ಲಿ ರಫ್ತಿಗಿಂತ ಆಮದು ಹೆಚ್ಚಳ: ವ್ಯಾಪಾರ ಕೊರತೆ ಅಂತರ ಹೆಚ್ಚಳ

ಪಿಟಿಐ
Published 14 ಆಗಸ್ಟ್ 2024, 15:41 IST
Last Updated 14 ಆಗಸ್ಟ್ 2024, 15:41 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಜುಲೈ ತಿಂಗಳಿನಲ್ಲಿ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಾಗಿದ್ದು, ವಿದೇಶಿ ವ್ಯಾಪಾರದ ಕೊರತೆ ಅಂತರ ₹1.97 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆಮದು ಮತ್ತು ರಫ್ತು ವಹಿವಾಟಿನ ನಡುವಣ ವ್ಯತ್ಯಾಸವನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.

ರಫ್ತು ವಹಿವಾಟು ಮೌಲ್ಯವು ಶೇ 1.2ರಷ್ಟು ಕುಸಿತವಾಗಿದೆ. ಒಟ್ಟು ₹2.85 ಲಕ್ಷ ಕೋಟಿ ಮೌಲ್ಯದ ರಫ್ತು ವಹಿವಾಟು ನಡೆದಿದೆ. ಆಮದು ವಹಿವಾಟು ಮೌಲ್ಯವು ಶೇ 7.45ರಷ್ಟು ಏರಿಕೆಯಾಗಿದ್ದು, ಒಟ್ಟು ₹4.82 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಕಚ್ಚಾ ತೈಲ, ಬೆಳ್ಳಿ ಮತ್ತು ಎಲೆಕ್ಟ್ರಾನಿಕ್ಸ್‌ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿ ಆಮದಾಗಿವೆ.

ADVERTISEMENT

ಕಚ್ಚಾ ತೈಲದ ಆಮದು ಶೇ 17.44ರಷ್ಟು ಏರಿಕೆಯಾಗಿದೆ. ಒಟ್ಟು ₹1.16 ಲಕ್ಷ ಕೋಟಿ ಮೌಲ್ಯದ ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ. ಬೆಳ್ಳಿ ಆಮದಿನಲ್ಲಿ ಶೇ 439ರಷ್ಟು ಏರಿಕೆಯಾಗಿದೆ. ಒಟ್ಟಾರೆ ₹1,400 ಕೋಟಿ ಮೌಲ್ಯದ ಬೆಳ್ಳಿಯು ಆಮದಾಗಿದೆ ಎಂದು ಸರ್ಕಾರ ತಿಳಿಸಿದೆ. 

ಜೂನ್‌ನಲ್ಲಿ ₹1.62 ಲಕ್ಷ ಕೋಟಿ ಇದ್ದ ವ್ಯಾಪಾರದ ಕೊರತೆ ಅಂತರವು ಜುಲೈನಲ್ಲಿ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್‌ ತಿಳಿಸಿದ್ದಾರೆ.

‘ಕಳೆದ ವರ್ಷ ದೇಶದ ಸರಕು ಮತ್ತು ಸೇವೆಯ ರಫ್ತು ಮೌಲ್ಯವು ₹65.30 ಲಕ್ಷ ಕೋಟಿ ದಾಟಿತ್ತು. ಪ್ರಸಕ್ತ ವರ್ಷವು ರಫ್ತು ವಹಿವಾಟಿನ ಸ್ಥಿತಿಗತಿ ಅವಲೋಕಿಸಿದರೆ ಈ ಪ್ರಮಾಣವೂ ಹೆಚ್ಚಳವಾಗಲಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.