ADVERTISEMENT

ತಿಂಗಳ ಕನಿಷ್ಠ ಮಟ್ಟಕ್ಕೆ ಮೀಸಲು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 15:27 IST
Last Updated 2 ಜೂನ್ 2023, 15:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಮೇ 26ಕ್ಕೆ ಕೊನೆಗೊಂಡ ವಾರದಲ್ಲಿ ₹48.29 ಲಕ್ಷ ಕೋಟಿಗೆ ತಲುಪಿದ್ದು, ಒಂದು ತಿಂಗಳ ಕನಿಷ್ಠ ಮಟ್ಟ ಇದಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನೀಡಿರುವ ಮಾಹಿತಿಯ ಪ್ರಕಾರ, ಮೇ 19ಕ್ಕೆ ಕೊನೆಗೊಂಡ ವಾರಕ್ಕೆ ಹೋಲಿಸಿದರೆ ₹35,588 ಕೋಟಿಯಷ್ಟು ಇಳಿಕೆ ಕಂಡಿದೆ. ಮೇ 19ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹವು ₹49,610 ಕೋಟಿ ಕಡಿಮೆ ಆಗಿತ್ತು.

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚು ಕುಸಿಯದಂತೆ ಮಾಡಲು ಆರ್‌ಬಿಐ ಮಧ್ಯಪ್ರವೇಶ ಮಾಡುತ್ತಿರುತ್ತದೆ. ಇದರಿಂದಾಗಿ ಮೀಸಲು ಸಂಗ್ರಹದಲ್ಲಿಯೂ ಏರಿಳಿತ ಆಗುತ್ತದೆ.

ADVERTISEMENT

ಮೀಸಲು ಸಂಗ್ರಹದಲ್ಲಿ ಹೆಚ್ಚಿನ ಪಾಲು ಹೊಂದಿರುವ ವಿದೇಶಿ ಕರೆನ್ಸಿಗಳ ಸಂಗ್ರಹವು ಮೇ 26ಕ್ಕೆ ಕೊನೆಗೊಂಡ ವಾರದಲ್ಲಿ ₹32,882 ಕೋಟಿ ಇಳಿಕೆ ಕಂಡು ₹42.71 ಲಕ್ಷ ಕೋಟಿಗೆ ಇಳಿಕೆ ಆಗಿದೆ ಎಂದು ಆರ್‌ಬಿಐ ಹೇಳಿದೆ.

ಚಿನ್ನದ ಮೀಸಲು ಸಂಗ್ರಹ ₹1,845 ಕೋಟಿಯಷ್ಟು ಇಳಿಕೆಯಾಗಿ ₹3.68 ಲಕ್ಷ ಕೋಟಿಯಷ್ಟಾಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್‌) ಭಾರತದ ಮೀಸಲು ಸಂಗ್ರಹ ₹41,902ಯಷ್ಟು ಇದೆ ಎಂದು ಆರ್‌ಬಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.