ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಮಾರ್ಚ್ 22ಕ್ಕೆ ಕೊನೆಗೊಂಡ ವಾರದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ಕೊನೆಗೊಂಡ ವಾರದಲ್ಲಿ ₹1,167 ಕೋಟಿಯಷ್ಟು ಹೆಚ್ಚಳವಾಗಿದೆ. ಒಟ್ಟಾರೆ ಮೀಸಲು ಸಂಗ್ರಹವು ₹53.58 ಲಕ್ಷ ಕೋಟಿಗೆ (642.63 ಬಿಲಿಯನ್ ಡಾಲರ್) ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಸತತ ಐದು ವಾರಗಳಿಂದಲೂ ಮೀಸಲು ಸಂಗ್ರಹ ಏರಿಕೆಯಾಗುತ್ತಿದೆ. ಈ ಅವಧಿಯಲ್ಲಿ ಮೀಸಲು ನಿಧಿಗೆ ಒಟ್ಟು ₹53,329 ಕೋಟಿ ಸೇರ್ಪಡೆಯಾಗಿದೆ ಎಂದು ವಿವರಿಸಿದೆ.
2021ರ ಸೆಪ್ಟೆಂಬರ್‌ನಲ್ಲಿ ಮೀಸಲು ಸಂಗ್ರಹವು ₹53.56 ಲಕ್ಷ ಕೋಟಿಗೆ (642.45 ಬಿಲಿಯನ್ ಡಾಲರ್) ತಲುಪಿದ್ದು, ಇಲ್ಲಿಯವರೆಗಿನ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿತ್ತು.
ಮಾರ್ಚ್ 22ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹದಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹವು ಗರಿಷ್ಠ ಪ್ರಮಾಣದಲ್ಲಿದೆ. ವಿದೇಶಿ ಕರೆನ್ಸಿಗಳ ಸಂಗ್ರಹವು ₹1,025 ಕೋಟಿ ಹೆಚ್ಚಳವಾಗಿದ್ದು, ಒಟ್ಟಾರೆ ಸಂಗ್ರಹವು ₹47.38 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಚಿನ್ನದ ಮೀಸಲು ಸಂಗ್ರಹವು ₹2,893 ಕೋಟಿ ಹೆಚ್ಚಾಗಿದ್ದು, ಒಟ್ಟು ₹4.29 ಲಕ್ಷ ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್) ಭಾರತದ ಮೀಸಲು ಸಂಗ್ರಹವು ₹225 ಕೋಟಿಯಷ್ಟು ಹೆಚ್ಚಾಗಿದ್ದು, ₹38,871 ಕೋಟಿಗೆ ಮುಟ್ಟಿದೆ ಎಂದು ತಿಳಿಸಿದೆ.
ಮೀಸಲು ಸಂಗ್ರಹದಲ್ಲಿ ಅಮೆರಿಕದ ಡಾಲರ್ ಹೊರತುಪಡಿಸಿ ಯೂರೊ, ಪೌಂಡ್ ಮತ್ತು ಯೆನ್ ಕರೆನ್ಸಿಯ ಮೌಲ್ಯ ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.