ADVERTISEMENT

ಜಿಡಿಪಿ ಶೇ 6.5ಕ್ಕೆ ಇಳಿಕೆ: ಐಸಿಆರ್‌ಎ ಅಂದಾಜು

ಪಿಟಿಐ
Published 20 ನವೆಂಬರ್ 2024, 15:22 IST
Last Updated 20 ನವೆಂಬರ್ 2024, 15:22 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್‌) ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 6.5ಕ್ಕೆ ಕುಸಿತಗೊಳ್ಳುವ ಸಾಧ್ಯತೆಯಿದೆ ಎಂದು ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ ಐಸಿಆರ್‌ಎ ಅಂದಾಜಿಸಿದೆ.

ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌ನಿಂದ ಜೂನ್‌) ಜಿಡಿಪಿಯು ಶೇ 6.7ರಷ್ಟು ದಾಖಲಾಗಿತ್ತು. ಎರಡನೇ ತ್ರೈಮಾಸಿಕದ ಅಧಿಕೃತ ವರದಿಯನ್ನು ರಾಷ್ಟ್ರೀಯ ಸಾಂಖ್ಯಿಕ ಇಲಾಖೆಯು ನವೆಂಬರ್‌ 30ರಂದು ಬಿಡುಗಡೆ ಮಾಡಲಿದೆ.

ಭಾರಿ ಮಳೆ ಹಾಗೂ ಕಾರ್ಪೊರೇಟ್‌ ವಲಯದಲ್ಲಿನ ಬೆಳವಣಿಗೆ ಕಡಿಮೆಯಾಗಿರುವುದೇ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತಕ್ಕೆ ಕಾರಣ ಎಂದು ಬುಧವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.

ADVERTISEMENT

ಆದರೆ, 2024–25ನೇ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆಯು ಶೇ 7ರಷ್ಟು ಪ್ರಗತಿ ಕಾಣಲಿದೆ. ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ಚಟುವಟಿಕೆಗಳು ಸದೃಢಗೊಳ್ಳಲಿವೆ ಎಂದು ಹೇಳಿದೆ.

2024–25ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 7.2ರಷ್ಟು ಬೆಳವಣಿಗೆ ಕಾಣಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂದಾಜಿಸಿದೆ. ಆದರೆ, ಕಳೆದ ಒಂದು ವಾರದ ಅವಧಿಯಲ್ಲಿ ವಿವಿಧ ರೇಟಿಂಗ್‌ ಸಂಸ್ಥೆಗಳು ಪ್ರಕಟಿಸಿರುವ ವರದಿಗಳು, ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿವೆ. ‌

ತ್ರೈಮಾಸಿಕ ಅವಧಿಯಲ್ಲಿ ಸರ್ಕಾರದ ವೆಚ್ಚದ ಪ್ರಮಾಣದಲ್ಲಿ ಏರಿಕೆಯಾಗಿದೆ. ಮುಂಗಾರು ಉತ್ತಮವಾಗಿದೆ. ಆದರೆ, ಗಣಿಗಾರಿಕೆ ಮತ್ತು ವಿದ್ಯುತ್‌ ವಲಯದ ಬೆಳವಣಿಗೆಯು ಇಳಿಕೆಯಾಗಿದೆ ಎಂದು ವರದಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.