ADVERTISEMENT

₹ 21.17 ಲಕ್ಷ ಕೋಟಿ ಮೌಲ್ಯದ ರಫ್ತು ವಹಿವಾಟು ನಿರೀಕ್ಷೆ

ಪಿಟಿಐ
Published 27 ಮಾರ್ಚ್ 2021, 10:26 IST
Last Updated 27 ಮಾರ್ಚ್ 2021, 10:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:‘ದೇಶದ ರಫ್ತು ವಹಿವಾಟು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ₹ 21.17 ಲಕ್ಷ ಕೋಟಿಗಳಷ್ಟಾಗಲಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 7ರಷ್ಟು ಕಡಿಮೆ ಇರಲಿದೆ’ ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

2019–20ನೇ ಹಣಕಾಸು ವರ್ಷದಲ್ಲಿ ದೇಶದ ರಫ್ತು ವಹಿವಾಟು ₹ 22.84 ಲಕ್ಷ ಕೋಟಿಗಳಷ್ಟಾಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 93ರಷ್ಟು ಆಗಲಿದೆ ಎಂದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅತ್ಯಂತ ಸವಾಲಿನ ವರ್ಷದಲ್ಲಿ ದೇಶವು ಬಹಳಷ್ಟು ಬೇಗನೆ ಪುಟಿದೆಳುವುದನ್ನು ಪರಿಗಣಿಸಿದರೆ ಇದು ಉತ್ತಮ ಬೆಳವಣಿಗೆಯಾಗಿದೆ. ಕೋವಿಡ್‌–19 ಸಾಂಕ್ರಾಮಿಕದ ಹೊರತಾಗಿಯೂ, ಭಾರತಕ್ಕೆ ಎಫ್‌ಡಿಐ ಒಳಹರಿವಿನ ದೃಷ್ಟಿಯಿಂದ ಇದು ‘ದಾಖಲೆಯ ವರ್ಷ’ ಎಂದು ಗೋಯಲ್ ಹೇಳಿದ್ದಾರೆ.

ADVERTISEMENT

ಕಳೆದ ವರ್ಷ ಯಾವ ವಿದೇಶಿ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಿವೆ ಎನ್ನುವ ಪ್ರಶ್ನೆಗೆ, ‘ಆ್ಯಪಲ್‌ ಮತ್ತು ಸ್ಯಾಮ್ಸಂಗ್‌ ಕಂಪನಿಗಳುಕಳೆದ ವರ್ಷ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದು ಮತ್ತಮ ವಹಿವಾಟು ವಿಸ್ತರಣೆಯನ್ನೂ ಮಾಡಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಈ ಎರಡೂ ಕಂಪನಿಗಳು ತಮ್ಮ ಜಾಗತಿಕ ಅಗತ್ಯಗಳನ್ನು ಈಡೇರಿಸಲು ಭಾರತವನ್ನು ಪ್ರಮುಖ ತಯಾರಿಕಾ ಕೇಂದ್ರವಾಗಿ ಮಾಡಿಕೊಳ್ಳುವ ಆಲೊಚನೆ ನಡೆಸುತ್ತಿವೆ ಎಂದು ನಾನು ಭಾವಿಸುತ್ತೇನೆ. ಔಷಧ ತಯಾರಿಕಾ ಕಂಪನಿಗಳು ಭಾರತದಲ್ಲಿ ತಮ್ಮ ಹೂಡಿಕೆಯನ್ನು ವಿಸ್ತರಿಸುವತ್ತ ಗಮನ ಹರಿಸುತ್ತಿವೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.