ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯು ಏಪ್ರಿಲ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಇಳಿಕೆಯಾಗಿದೆ.
ತಯಾರಿಕಾ ವಲಯದ ಚಟುವಟಿಕೆಗಳು ತಗ್ಗಿರುವುದೇ ಈ ಇಳಿಕೆಗೆ ಕಾರಣವಾಗಿದೆ. ಆದರೆ, ಗಣಿಗಾರಿಕೆ ಮತ್ತು ವಿದ್ಯುತ್ ವಲಯದ ಬೆಳವಣಿಗೆಯು ಉತ್ತಮವಾಗಿದೆ ಎಂದು ಬುಧವಾರ ಬಿಡುಗಡೆಯಾಗಿರುವ ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವರದಿ ತಿಳಿಸಿದೆ.
ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಈ ಬೆಳವಣಿಗೆಯು ಜನವರಿಯಲ್ಲಿ ಶೇ 4.2ರಷ್ಟು ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿತ್ತು. ಫೆಬ್ರುವರಿಯಲ್ಲಿ ಶೇ 5.6ರಷ್ಟು ಹಾಗೂ ಮಾರ್ಚ್‌ನಲ್ಲಿ ಶೇ 5.4ರಷ್ಟು ಪ್ರಗತಿ ದಾಖಲಿಸಿತ್ತು.
2022–23ನೇ ಪೂರ್ಣ ಆರ್ಥಿಕ ವರ್ಷದಲ್ಲಿ ಕೈಗಾರಿಕಾ ಉತ್ಪಾದನೆಯ ಶೇ 5.2ರಷ್ಟು ಬೆಳವಣಿಗೆ ದಾಖಲಿಸಿದ್ದರೆ, 2023–24ನೇ ಆರ್ಥಿಕ ವರ್ಷದಲ್ಲಿ ಶೇ 5.9ರಷ್ಟು ಪ್ರಗತಿ ಕಂಡಿದೆ.
2023ರ ಏಪ್ರಿಲ್‌ಗೆ ಹೋಲಿಸಿದರೆ ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಗಣಿಗಾರಿಕೆ ವಲಯವು ಶೇ 5.1ರಿಂದ ಶೇ 6.7ರಷ್ಟು ಬೆಳವಣಿಗೆ ಕಂಡಿದೆ. ತಯಾರಿಕಾ ವಲಯದ ಬೆಳವಣಿಗೆಯು ಶೇ 5.5ರಿಂದ ಶೇ 3.9ಕ್ಕೆ ಇಳಿಕೆಯಾಗಿದೆ.
ವಿದ್ಯುತ್ ವಲಯದ ಉತ್ಪಾದನೆಯು ಶೇ 1.1ರಿಂದ ಶೇ 10.2ರಷ್ಟು ಏರಿಕೆಯಾಗಿದೆ. ಬಂಡವಾಳ ಸರಕುಗಳ ವಲಯದ ಬೆಳವಣಿಗೆಯು ಶೇ 3.1ಕ್ಕೆ ಇಳಿಕೆಯಾಗಿದೆ. ಗ್ರಾಹಕರ ಬಳಕೆಯ ವಸ್ತುಗಳ ಉತ್ಪಾದನೆಯು ಶೇ 2.3ರಿಂದ ಶೇ 9.8ರಷ್ಟು ಪ್ರಗತಿ ಕಂಡಿದೆ. ಮೂಲಸೌಕರ್ಯ/ ನಿರ್ಮಾಣ ಸರಕುಗಳ ವಲಯದ ಬೆಳವಣಿಗೆಯು ಶೇ 8ಕ್ಕೆ ಇಳಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.