ನವದೆಹಲಿ: ದೇಶದ ತಯಾರಿಕಾ ವಲಯದ ಬೆಳವಣಿಗೆಯು ಮಾರ್ಚ್‌ನಲ್ಲಿ ಉತ್ತಮ ಏರಿಕೆ ಕಂಡಿದ್ದು, 16 ವರ್ಷಗಳ ಗರಿಷ್ಠ ಮಟ್ಟಕ್ಕೆ ದಾಖಲಾಗಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಇಂಡಿಯಾ ಸಂಸ್ಥೆ ಹೇಳಿದೆ.
ತಯಾರಿಕೆ ಮತ್ತು ಬೇಡಿಕೆಯಲ್ಲಿ ಹೆಚ್ಚಳವಾಗಿದೆ. ಜೊತೆಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಆರ್ಡರ್‌ಗಳು ಹೆಚ್ಚಳವಾಗಿರುವುದೇ ಈ ಏರಿಕೆಗೆ ಕಾರಣವಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ವರದಿ ತಿಳಿಸಿದೆ.
ಫೆಬ್ರುವರಿಯಲ್ಲಿ 56.9 ಇದ್ದ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ), ಮಾರ್ಚ್‌ನಲ್ಲಿ 59.1ಕ್ಕೆ ಏರಿಕೆಯಾಗಿದೆ. 2008ರ ಬಳಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪಿಎಂಐ 50ಕ್ಕಿಂತ ಹೆಚ್ಚಿದ್ದರೆ ಬೆಳವಣಿಗೆಯ ಏರಿಕೆಯನ್ನು ತೋರಿಸುತ್ತದೆ. ಇದಕ್ಕಿಂತ ಕೆಳಗಿದ್ದರೆ ಬೆಳವಣಿಗೆಯ ಕುಸಿತದ ಸೂಚಕವಾಗಿದೆ.
ತಯಾರಿಕಾ ವಲಯದಲ್ಲಿ ಬೇಡಿಕೆ ಹೆಚ್ಚಿರುವುದು ಹೊಸದಾಗಿ ಉದ್ಯೋಗ ಹುಡುಕುವವರಿಗೆ ನೆರವಾಗಿದೆ. ಕಳೆದ ಎರಡು ತಿಂಗಳಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಕಾರ್ಖಾನೆಗಳಲ್ಲಿ ಉದ್ಯೋಗಿಗಳ ಸೇರ್ಪಡೆ ಹೆಚ್ಚಿದೆ.
‘ಮಾರ್ಚ್‌ನಲ್ಲಿ ಉದ್ಯೋಗಾವಕಾಶ ಸೃಷ್ಟಿಯು ನಿರೀಕ್ಷಿತ ಮಟ್ಟದಷ್ಟು ವೇಗವಾಗಿಲ್ಲ. ಆದರೆ, 2023ರ ಸೆಪ್ಟೆಂಬರ್ ನಂತರದ ಅವಧಿಗೆ ಹೋಲಿಸಿದರೆ ಉತ್ತಮವಾಗಿದೆ.
‘ಹೊಸ ಆರ್ಡರ್‌ಗಳ ಸ್ವೀಕಾರ ಹಾಗೂ ಉತ್ಪಾದನೆ ಸದೃಢಗೊಂಡಿದೆ. ಇದರಿಂದ ತಯಾರಿಕಾ ವಲಯದ ಕಂಪನಿಗಳು ನೇಮಕಾತಿಯನ್ನು ವಿಸ್ತರಿಸಿವೆ. ಪೂರ್ಣಾವಧಿಗೆ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ’ ಎಂದು ಎಚ್‌ಎಸ್‌ಬಿಸಿ ಅರ್ಥಶಾಸ್ತ್ರಜ್ಞ ಇನೆಸ್ ಲ್ಯಾಮ್ ಹೇಳಿದ್ದಾರೆ.
ಬೇಡಿಕೆ ವೃದ್ಧಿಸಿರುವುದರಿಂದ ಉತ್ಪಾದನೆ ಮತ್ತು ಮಾರಾಟದಲ್ಲಿ ಕ್ಷಿಪ್ರಗತಿಯ ಏರಿಕೆಯಾಗಿದೆ. ಹೊಸ ವಹಿವಾಟುಗಳಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಲಭಿಸಿದೆ. ಆಫ್ರಿಕಾ, ಏಷ್ಯಾ, ಯೂರೋಪ್ ಹಾಗೂ ಅಮೆರಿಕದಿಂದ ಹೊಸ ಆರ್ಡರ್ ಹಾಗೂ ಮಾರಾಟ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.