ADVERTISEMENT

ತಯಾರಿಕಾ ವಲಯ: 31 ತಿಂಗಳ ಗರಿಷ್ಠ

ಹೊಸ ವಹಿವಾಟುಗಳಿಗೆ ಬೇಡಿಕೆ; ಮಾರುಕಟ್ಟೆಯಲ್ಲಿ ಪೂರಕ ವಾತಾವರಣ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 13:24 IST
Last Updated 1 ಜೂನ್ 2023, 13:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಯು ಮೇ ತಿಂಗಳಿನಲ್ಲಿ ಇನ್ನಷ್ಟು ಸುಧಾರಣೆ ಕಂಡಿದ್ದು 31 ತಿಂಗಳ ಗರಿಷ್ಠ ಮಟ್ಟ ತಲುಪಿದೆ ಎಂದು ಎಸ್‌ ಆ್ಯಂಡ್‌ ಪಿ ಇಂಡಿಯಾ ಸಂಸ್ಥೆ ಗುರುವಾರ ಹೇಳಿದೆ.

ಹೊಸ ವಹಿವಾಟುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ಹಾಗೂ ಮಾರುಕಟ್ಟೆಯು ಅನುಕೂಲಕರವಾಗಿ ಇರುವುದರಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಸಂಸ್ಥೆಯು ತಿಳಿಸಿದೆ.

ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್‌ ಮ್ಯಾನೇಜರ್ಸ್ ಇಂಡೆಕ್ಸ್‌ (ಪಿಎಂಐ) ಏಪ್ರಿಲ್‌ನಲ್ಲಿ 57.2 ಇದ್ದಿದ್ದು ಮೇ ತಿಂಗಳಿನಲ್ಲಿ 58.7ಕ್ಕೆ ಏರಿಕೆ ಕಂಡಿದೆ. 2020ರ ಅಕ್ಟೋಬರ್‌ ನಂತರದ ಗರಿಷ್ಠ ಮಟ್ಟ ಇದಾಗಿದೆ.

ADVERTISEMENT

ಭಾರತದಲ್ಲಿ ತಯಾರಾಗುವ ಉತ್ಪನ್ನಗಳಿಗೆ ದೇಶದ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆ ಇದೆ ಎನ್ನುವುದನ್ನು ಈ ಬೆಳವಣಿಗೆಯು ಸೂಚಿಸುತ್ತಿದೆ.

ದೇಶದಲ್ಲಿ ಮಾರಾಟ ಹೆಚ್ಚಾಗುತ್ತಿರುವುದು ದೇಶದ ಆರ್ಥಿಕ ತಳಹದಿಯನ್ನು ಇನ್ನಷ್ಟು ಬಲಪಡಿಸಲಿದೆ. ವಿದೇಶಿ ವಹಿವಾಟುಗಳು ಹೆಚ್ಚಾಗುವುದರಿಂದ ಅಂತರರಾಷ್ಟ್ರಿಯ ಪಾಲುದಾರಿಕೆಗಳು ಬಲಗೊಳ್ಳಲಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಥಾನ ಸುಧಾರಿಸಲಿದೆ ಎಂದು ಎಸ್‌ ಅ್ಯಂಡ್‌ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ ಲಿಮಾ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರಾಟದಲ್ಲಿ ಭಾರತದ ಕಂಪನಿಗಳು ಆರು ತಿಂಗಳ ವೇಗದ ಬೆಳವಣಿಗೆ ಕಂಡಿವೆ ಎಂದು ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.