ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಏಪ್ರಿಲ್ ತಿಂಗಳಲ್ಲಿ ಮತ್ತಷ್ಟು ಚುರುಕು ಪಡೆದುಕೊಂಡಿವೆ. ಹೊಸ ವಹಿವಾಟುಗಳಲ್ಲಿ ಬೆಳವಣಿಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ವಹಿವಾಟು ಸುಧಾರಣೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದಿರುವುದು ಇದಕ್ಕೆ ಕಾರಣ.
ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು (ಪಿಎಂಐ) ಮಾರ್ಚ್‌ನಲ್ಲಿ 56.4 ಇದ್ದುದು, ಏಪ್ರಿಲ್ ತಿಂಗಳಲ್ಲಿ 57.2ಕ್ಕೆ ತಲುಪಿದೆ. ಏಪ್ರಿಲ್‌ನಲ್ಲಿ ದಾಖಲಾಗಿರುವುದು ನಾಲ್ಕು ತಿಂಗಳ ಗರಿಷ್ಠ ಮಟ್ಟ.
ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು, 50ಕ್ಕಿಂತ ಕಡಿಮೆ ಇದ್ದರೆ ಅದನ್ನು ಕುಸಿತ ಎಂದು ಅರ್ಥೈಸಲಾಗುತ್ತದೆ.
‘ಬೆಲೆ ಹೆಚ್ಚಳದ ಒತ್ತಡವು ಜಾಸ್ತಿ ಇಲ್ಲದಿದ್ದುದು ಕಂಪನಿಗಳ ಪಾಲಿಗೆ ಅನುಕೂಲಕರ ಆಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಹೆಚ್ಚಾಗಿದ್ದುದು, ಪೂರೈಕೆ ವ್ಯವಸ್ಥೆಯಲ್ಲಿನ ಸುಧಾರಣೆ ಕೂಡ ಕಂಪನಿಗಳಿಗೆ ನೆರವಾಗಿವೆ’ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ.
‘ಭಾರತದ ತಯಾರಿಕಾ ವಲಯದ ಪಾಲಿಗೆ ಅವಕಾಶಗಳು ವಿಪುಲವಾಗಿವೆ ಎಂದು ಅನಿಸುತ್ತಿದೆ. ತಯಾರಿಕಾ ವಲಯವು ಉದ್ಯೋಗ ಸೃಷ್ಟಿಯ ಮೂಲಕ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ಕಚ್ಚಾ ವಸ್ತುಗಳ ಖರೀದಿ ಹೆಚ್ಚಾಗಿದೆ’ ಎಂದು ಲಿಮಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.