ADVERTISEMENT

8 ತಿಂಗಳ ಕನಿಷ್ಠ ಮಟ್ಟಕ್ಕೆ ತಯಾರಿಕಾ ಚಟುವಟಿಕೆ

ಪಿಟಿಐ
Published 1 ನವೆಂಬರ್ 2023, 12:48 IST
Last Updated 1 ನವೆಂಬರ್ 2023, 12:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ತಯಾರಿಕಾ ವಲಯದ ಚಟುವಟಿಕೆಯು ಅಕ್ಟೋಬರ್‌ನಲ್ಲಿ 8 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.

ತಯಾರಿಕಾ ವಲಯದ ಬೆಳವಣಿಗೆಯನ್ನು ತಿಳಿಸುವ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಸೆಪ್ಟೆಂಬರ್‌ನಲ್ಲಿ 57.5 ರಷ್ಟು ಇದ್ದಿದ್ದು ಅಕ್ಟೋಬರ್‌ನಲ್ಲಿ 55.5ಕ್ಕೆ ಇಳಿಕೆ ಕಂಡಿದೆ. ಫೆಬ್ರುವರಿ ಬಳಿಕ ಅತ್ಯಂತ ನಿಧಾನಗತಿಯ ಬೆಳವಣಿಗೆ ದರ ಇದಾಗಿದೆ ಎಂದು ತಿಳಿಸಿದೆ. ಹೊಸ ಯೋಜನೆಗಳು ನಿಧಾನಗತಿಯ ಬೆಳವಣಿಗೆ ಕಂಡಿರುವುದರಿಂದ ತಯಾರಿಕೆಯೂ ತಗ್ಗಿದೆ. ಇದು ಸೂಚ್ಯಂಕದಲ್ಲಿ ಇಳಿಕೆ ಕಾಣುವಂತೆ ಮಾಡಿದೆ. 

ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. 50ಕ್ಕಿಂತಲೂ ಕೆಳಗಿನ ಮಟ್ಟದಲ್ಲಿ ಇದ್ದರೆ ನಕಾರಾತ್ಮಕ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸತತ 28ನೇ ತಿಂಗಳಿನಲ್ಲಿಯೂ ಒಟ್ಟಾರೆ ಬೆಳವಣಿಗೆಯು ಸಕಾರಾತ್ಮಕವಾಗಿಯೇ ಮುಂದುವರಿದಿದೆ.

ADVERTISEMENT

ಉತ್ಪನ್ನಗಳಿಗೆ ಸದ್ಯ ಇರುವ ಬೇಡಿಕೆಯು ನಿರೀಕ್ಷಿತ ಮಟ್ಟದಲ್ಲಿ ಇರದೇ ಇರುವುದು ಕಂಪನಿಗಳನ್ನು ಆತಂಕಕ್ಕೆ ದೂಡಿದೆ. ಹೀಗಾಗಿ ಹೊಸ ಯೋಜನೆಗಳಿಗೆ ಬೇಡಿಕೆಯು ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ತಿಳಿಸಿದ್ದಾರೆ.

ತಯಾರಿಕೆ, ರಫ್ತು, ಖರೀದಿ ಸಾಮರ್ಥ್ಯ ಮತ್ತು ನೇಮಕ ಪ್ರಕ್ರಿಯೆ ಮತ್ತು ವಹಿವಾಟು ನಡೆಸುವ ವಿಶ್ವಾಸ... ಎಲ್ಲವೂ ಮಂದಗತಿಯಲ್ಲಿ ಇರುವುದೇ ವಲಯದ ಬೆಳವಣಿಗೆ ಕುಗ್ಗಿಲು ಕಾರಣವಾಗಿದೆ ಎಂದು ಸಮೀಕ್ಷೆಯು ತಿಳಿಸಿದೆ.

ಶೇ 4ರಷ್ಟು ಕಂಪನಿಗಳು ಮಾತ್ರವೇ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡಿವೆ. ಆದರೆ ಶೇ 95ರಷ್ಟು ಕಂಪನಿಗಳು ತಮ್ಮ ಸಿಬ್ಬಂದಿ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಉದ್ಯೋಗ ಸೃಷ್ಟಿ ಪ್ರಮಾಣವು ಏಪ್ರಿಲ್‌ ಬಳಿಕ ಮಂದಗತಿಯಲ್ಲಿ ಸಾಗುತ್ತಿದೆ.

ತಯಾರಿಕಾ ವೆಚ್ಚ ತೀವ್ರ ಏರಿಕೆ ಕಂಡಿದೆ. ಆದರೆ, ಉತ್ಪನ್ನಗಳ ಬೆಲೆಯನ್ನು ಸದ್ಯದ ಮಟ್ಟಿಗೆ ಹೆಚ್ಚಿಸಿಲ್ಲ. ಬೇಡಿಕೆ ಮತ್ತು ಹಣದುಬ್ಬರವನ್ನು ಪರಿಗಣಿಸಿದರೆ, ವಹಿವಾಟು ನಡೆಸುವ ವಿಶ್ವಾಸವು ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.

ತಯಾರಿಕಾ ವಲಯದ ಬೆಳವಣಿಗೆ ಸೂಚ್ಯಂಕ

ಜೂನ್‌; 57.8

ಜುಲೈ; 57.7

ಆಗಸ್ಟ್‌; 58.6

ಸೆಪ್ಟೆಂಬರ್‌; 57.5

ಅಕ್ಟೋಬರ್‌; 55.5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.