ADVERTISEMENT

ಮೇ ತಿಂಗಳಿನಲ್ಲಿ ತಯಾರಿಕಾ ವಲಯದ ಪ್ರಗತಿ ನಿಧಾನ

ಪಿಟಿಐ
Published 3 ಜೂನ್ 2024, 14:20 IST
Last Updated 3 ಜೂನ್ 2024, 14:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತದ ತಯಾರಿಕಾ ವಲಯದ ಪ್ರಗತಿಯು ಮೇ ಸೇರಿ ಸತತ ಎರಡು ತಿಂಗಳಲ್ಲಿ ನಿಧಾನಗತಿಯಲ್ಲಿಯೇ ಇದೆ. ಆದರೆ, ಜಾಗತಿಕ ಮಟ್ಟದಲ್ಲಿ ಮಾರಾಟವು 13 ವರ್ಷಗಳ ಗರಿಷ್ಠ ಮಟ್ಟ ಮುಟ್ಟಿದೆ. ಹಾಗಾಗಿ, ವ್ಯಾಪಾರ ವಿಸ್ತರಣೆಯು ದೃಢವಾಗಿ ನಡೆಯುತ್ತಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆ ಸೋಮವಾರ ತಿಳಿಸಿದೆ.

ಎಚ್‌ಎಸ್‌ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಸೂಚ್ಯಂಕವು (ಪಿಎಂಐ) ಏಪ್ರಿಲ್‌ನಲ್ಲಿ 58.8 ದಾಖಲಾಗಿತ್ತು. ಮೇ ತಿಂಗಳಲ್ಲಿ 57.5ಕ್ಕೆ ಇಳಿದಿದೆ. ಸತತ ಎರಡನೇ ತಿಂಗಳೂ ಸೂಚ್ಯಂಕ ಕಡಿಮೆಯಾಗಿದೆ. ಮಾರ್ಚ್‌ನಲ್ಲಿ ಸೂಚ್ಯಂಕವು 16 ವರ್ಷಗಳ ಗರಿಷ್ಠ 59.1ಕ್ಕೆ ಏರಿತ್ತು.

ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. 50ಕ್ಕಿಂತಲೂ ಕೆಳಗಿನ ಮಟ್ಟದಲ್ಲಿ ದಾಖಲಾದರೆ ನಕಾರಾತ್ಮಕವೆಂದು ಪರಿಗಣಿಸಲಾಗುತ್ತದೆ.

ADVERTISEMENT

ತಯಾರಿಕಾ ವಲಯವು ಮೇ ತಿಂಗಳಲ್ಲಿ ವಿಸ್ತರಣೆಯಲ್ಲಿಯೇ ಇದೆ. ಹೊಸ ಬೇಡಿಕೆ ಮತ್ತು ತಯಾರಿಕೆಯಲ್ಲಿ ಅಲ್ಪ ಏರಿಕೆಯಾಗಿದೆ. ಈ ತಿಂಗಳಲ್ಲಿ ಹೆಚ್ಚಿದ ಬಿಸಿಲು  ಕೆಲಸದ ಅವಧಿಯನ್ನು ಕಡಿಮೆಗೊಳಿಸಿತು. ತಯಾರಿಕಾ ವೆಚ್ಚ ಹೆಚ್ಚಳವಾಯಿತು. ಇದರಿಂದ ತಯಾರಿಕೆ ನಿಧಾನವಾಯಿತು ಎಂದು ಎಚ್‌ಎಸ್‌ಬಿಸಿಯ ಗ್ಲೋಬಲ್ ಅರ್ಥಶಾಸ್ತ್ರಜ್ಞ ಮೈತ್ರೇಯಿ ದಾಸ್ ಹೇಳಿದ್ದಾರೆ.

ಚುನಾವಣಾ ಸಂಬಂಧಿತ ಅಡ್ಡಿಗಳಿಂದಾಗಿ ಬೆಳವಣಿಗೆಯು ಕುಂಠಿತಗೊಂಡಿದೆ. ಆದರೂ ಹೊಸ ರಫ್ತು ಬೇಡಿಕೆ ವೇಗವಾಗಿ ಏರಿಕೆಯಾಗಿದೆ. ಆಫ್ರಿಕಾ, ಏಷ್ಯಾ, ಅಮೆರಿಕ, ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಗ್ರಾಹಕರಿಂದ ಲಾಭಗಳನ್ನು ತಯಾರಕರು ಕಂಡಿದ್ದರಿಂದ ಅಂತರರಾಷ್ಟ್ರೀಯ ಮಾರಾಟದಲ್ಲಿನ ಏರಿಕೆಯು 13 ವರ್ಷಗಳಲ್ಲಿಯೇ ಪ್ರಬಲವಾಗಿದೆ. ಹೆಚ್ಚಿದ ಮಾರಾಟವು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಿತು ಎಂದು ವರದಿ ತಿಳಿಸಿದೆ.

ಸುಮಾರು 400 ತಯಾರಕರಿಗೆ ಕಳುಹಿಸಲಾದ ಪ್ರಶ್ನಾವಳಿಗಳಲ್ಲಿ ನಮೂದಾಗಿರುವ ಪ್ರತಿಕ್ರಿಯೆ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.