ನವದೆಹಲಿ: ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇದ್ದರೂ ದೇಶದ ತಯಾರಿಕಾ ವಲಯದ ಬೆಳವಣಿಗೆಯು ಮೇನಲ್ಲಿ ಸ್ಥಿರವಾಗಿದೆ. ಆದರೆ, ಏಪ್ರಿಲ್‌ಗೆ ಹೋಲಿಸಿದರೆ ಅತ್ಯಲ್ಪ ಇಳಿಕೆ ಕಂಡಿದೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಸಂಸ್ಥೆ ಹೇಳಿದೆ.
ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ಏಪ್ರಿಲ್‌ನಲ್ಲಿ 54.7 ರಷ್ಟು ಇತ್ತು. ಇದು ಮೇನಲ್ಲಿ 54.6ಕ್ಕೆ ಅಲ್ಪ ಇಳಿಕೆ ಕಂಡಿದೆ.
ವಲಯದ ಒಟ್ಟಾರೆ ಸ್ಥಿತಿಯುಸತತ 11ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಮಟ್ಟದಲ್ಲಿಯೇ ಇದೆ. ಪಿಎಂಐ 50ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಸಕಾರಾತ್ಮಕ ಬೆಳವಣಿಗೆ, 50ಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಇದ್ದರೆ ನಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.
ತಯಾರಿಕೆ ಮತ್ತು ಹೊಸ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಿರುವುದು ಹಾಗೂ ಅಂತರರಾಷ್ಟ್ರೀಯ ಮಾರಾಟವು 11 ವರ್ಷಗಳ ಗರಿಷ್ಠ ಮಟ್ಟಕ್ಕೆ ಹೆಚ್ಚಳ ಆಗಿರುವುದರಿಂದ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ.
ತಯಾರಿಕಾ ವೆಚ್ಚವು ಸತತ 22ನೇ ತಿಂಗಳಿನಲ್ಲಿಯೂ ಏರಿಕೆ ಕಂಡಿದೆ. ಎಲೆಕ್ಟ್ರಾನಿಕ್ ಬಿಡಿಭಾಗಗಳು, ವಿದ್ಯುತ್, ಸಾಗಣೆ, ಲೋಹ ಮತ್ತು ಜವಳಿ ಮೇಲಿನ ವೆಚ್ಚವು ಹೆಚ್ಚಾಗಿದೆ. ಹಣದುಬ್ಬರವು ಏಪ್ರಿಲ್‌ನಲ್ಲಿ ತುಸು ತಗ್ಗಿದ್ದರೂ ಒಟ್ಟಾರೆಯಾಗಿ ಗರಿಷ್ಠ ಮಟ್ಟದಲ್ಲಿಯೇ ಇದೆ.
ವಲಯದ ಬೆಳವಣಿಗೆ ವಿವರ (%)
ಜನವರಿ; 54
ಫೆಬ್ರುವರಿ; 54.9
ಮಾರ್ಚ್; 54
ಏಪ್ರಿಲ್; 54.7
ಮೇ; 54.6
ಮಾಹಿತಿ: ನಿಕೇಯ್, ಐಎಚ್‌ಎಸ್ ಮರ್ಕಿಟ್ & ಎಸ್‌ಆ್ಯಂಡ್‌ಪಿ ಗ್ಲೋಬಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.