ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆ ಅಕ್ಟೋಬರ್‌ನಲ್ಲಿ ಬೆಳವಣಿಗೆ ದಾಖಲಿಸಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ವರದಿ ಸೋಮವಾರ ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ಸೂಚ್ಯಂಕವು 56.5 ದಾಖಲಾಗಿತ್ತು. ಇದು ಎಂಟು ತಿಂಗಳ ಕನಿಷ್ಠ ಮಟ್ಟವಾಗಿತ್ತು. ಆದರೆ, ಅಕ್ಟೋಬರ್‌ನಲ್ಲಿ ಸೂಚ್ಯಂಕವು 57.5ಕ್ಕೆ ಏರಿಕೆಯಾಗಿದೆ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕದ (ಪಿಎಂಐ) ವರದಿ ತಿಳಿಸಿದೆ. ಆಗಸ್ಟ್‌ನಲ್ಲಿ ಸೂಚ್ಯಂಕ 57.5ರಷ್ಟಿತ್ತು. 2023ರ ಅಕ್ಟೋಬರ್‌ನಲ್ಲಿ 55.5 ದಾಖಲಾಗಿತ್ತು.
ಸೂಚ್ಯಂಕಗಳು 50 ಕ್ಕಿಂತ ಕಡಿಮೆ ಇದ್ದರೆ ನಕಾರಾತ್ಮಕ ಪ್ರಗತಿ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಹೆಚ್ಚಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.
‘ಹೊಸ ಬೇಡಿಕೆಗಳು ಮತ್ತು ಅಂತರರಾಷ್ಟ್ರೀಯ ಮಾರಾಟದಲ್ಲಿನ ತ್ವರಿತ ಏರಿಕೆಯು ದೇಶದ ತಯಾರಿಕಾ ವಲಯದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸೂಚಿಸುತ್ತದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ಹೇಳಿದ್ದಾರೆ.
ಹೊಸ ಉತ್ಪನ್ನಗಳು ಮತ್ತು ಯಶಸ್ವಿ ಮಾರುಕಟ್ಟೆ ತಂತ್ರಗಾರಿಕೆಯು ಮಾರಾಟ ಹೆಚ್ಚಳವಾಗಲು ನೆರವಾಯಿತು. ಏಷ್ಯಾ, ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದಿಂದ ಬೇಡಿಕೆ ಹೆಚ್ಚಳವಾಗಿದೆ. ಹೆಚ್ಚಿದ ಬೇಡಿಕೆಯಿಂದ ಕಂಪನಿಗಳು ಸಿಬ್ಬಂದಿ ನೇಮಕಕ್ಕೆ ಮುಂದಾದವು. ಸರಕುಗಳ ಬೆಲೆ ಏರಿಕೆ ಮತ್ತು ಸಾಗಣೆ ವೆಚ್ಚದ ಹೆಚ್ಚಳದಿಂದ ತಯಾರಿಕೆ ಮತ್ತು ಉತ್ಪಾದನೆ ವೆಚ್ಚದ ಬೆಲೆ ಏರಿಕೆಯಾದವು ಎಂದು ಭಂಡಾರಿ ಹೇಳಿದ್ದಾರೆ.
ಗ್ರಾಹಕರಿಂದ ಹೆಚ್ಚಿದ ಬೇಡಿಕೆ, ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಮಾರಾಟದಿಂದ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ವ್ಯಾಪಾರ ಹೆಚ್ಚಳವಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಸುಮಾರು 400 ತಯಾರಕರಿಗೆ ಕಳುಹಿಸಲಾದ ಪ್ರಶ್ನಾವಳಿಗಳಲ್ಲಿ ನಮೂದಾಗಿರುವ ಪ್ರತಿಕ್ರಿಯೆ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ತಯಾರಿಕಾ ವಲಯದ ಸೂಚ್ಯಂಕ
2023
ಅಕ್ಟೋಬರ್;55.5
ನವೆಂಬರ್; 56.0
ಡಿಸೆಂಬರ್; 54.9
2024
ಜನವರಿ;56.5
ಫೆಬ್ರುವರಿ; 56.9
ಮಾರ್ಚ್; 59.1
ಏಪ್ರಿಲ್; 58.8
ಮೇ; 57.5
ಜೂನ್; 58.3
ಜುಲೈ; 58.1
ಆಗಸ್ಟ್; 57.5
ಸೆಪ್ಟೆಂಬರ್; 56.5
ಅಕ್ಟೋಬರ್;57.5
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.