ADVERTISEMENT

ತಯಾರಿಕೆ: ಬೆಳವಣಿಗೆ ಅಬಾಧಿತ -ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ ವರದಿ

ಪಿಟಿಐ
Published 7 ನವೆಂಬರ್ 2022, 19:31 IST
Last Updated 7 ನವೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ತಯಾರಿಕಾ ವಲಯದ ಈಗಿನ ಬೆಳವಣಿಗೆಯ ವೇಗವು ಮುಂದಿನ ಆರರಿಂದ ಒಂಬತ್ತು ತಿಂಗಳವರೆಗೂ ಇದೇ ಮಟ್ಟದಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಫಿಕ್ಕಿ) ಹೇಳಿದೆ.

ಸಂಘವು ನಡೆಸಿರುವ ಸಮೀಕ್ಷೆಯ ಪ್ರಕಾರ, ತಯಾರಿಕಾ ವಲಯದ ಸರಾಸರಿ ಸಾಮರ್ಥ್ಯದ ಬಳಕೆಯು ಈಗ ಶೇಕಡ 70ಕ್ಕೂ ಹೆಚ್ಚಿದೆ. ಈ ವಲಯದಲ್ಲಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎನ್ನುವುದನ್ನು ಇದು ಸೂಚಿಸುತ್ತಿದೆ. ಭವಿಷ್ಯದ ಹೂಡಿಕೆಯ ಮುನ್ನೋಟ ಸಹ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ತುಸು ಸುಧಾರಿಸಿದೆ.

ಹೀಗಿದ್ದರೂ, ರಷ್ಯಾ–ಉಕ್ರೇನ್‌ ಬಿಕ್ಕಟ್ಟಿನಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಎದುರಾಗಿರುವ ಅನಿಶ್ಚಿತ ಸ್ಥಿತಿ ಹಾಗೂ ಕೋವಿಡ್‌ನ ಹಲವು ರೂಪಾಂತರಿ ತಳಿಗಳು ಪ್ರಮುಖ ಆರ್ಥಿಕತೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಸಮೀಕ್ಷೆಯು ತಿಳಿಸಿದೆ.

ADVERTISEMENT

ಕಚ್ಚಾ ವಸ್ತುಗಳ ದರ ಗರಿಷ್ಠ ಮಟ್ಟದಲ್ಲಿ ಇರುವುದು, ನಿಯಮಗಳು ಮತ್ತು ಅನುಮತಿ ಸಿಗುವುದರಲ್ಲಿ ತೊಡಕು, ದುಡಿಯುವ ಬಂಡವಾಳದ ಕೊರತೆ, ಸರಕು ಸಾಗಣೆ ವೆಚ್ಚ, ದೇಶಿ ಮತ್ತು ಜಾಗತಿಕ ಮಟ್ಟದಲ್ಲಿ ತಗ್ಗಿದ ಬೇಡಿಕೆ, ಅಸ್ಥಿರ ಮಾರುಕಟ್ಟೆ ಹಾಗೂ ಪೂರೈಕೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳು ವಹಿವಾಟು ವಿಸ್ತರಣೆಗೆ ತೊಡಕಾಗಿವೆ ಎಂದು ಕಂಪನಿಗಳು ಹೇಳಿವೆ.

2022–23ರ ಎರಡನೇ ತ್ರೈಮಾಸಿಕಕ್ಕೆ ಸಂಬಂಧಿಸಿದಂತೆ, ಆಟೊಮೊಟಿವ್‌ ಮತ್ತು ವಾಹನ ಬಿಡಿಭಾಗಗಳು, ಬಂಡವಾಳ ಸರಕುಗಳು, ಸಿಮೆಂಟ್‌, ರಾಸಾಯನಿಕ, ರಸಗೊಬ್ಬರ, ಔಷಧ, ಎಲೆಕ್ಟ್ರಾನಿಕ್ಸ್‌, ಮಷಿನ್‌ ಟೂಲ್ಸ್‌, ಲೋಹ, ಜವಳಿ, ಜವಳಿ ಯಂತ್ರೋಪಕರಣ ವಲಯಗಳ ಪರಿಸ್ಥಿತಿಯನ್ನು ಅವಲೋಕಿಸಿ ಸಮೀಕ್ಷಾ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದೆ.

ತಯಾರಿಕಾ ವಲಯದ ಬೆಳವಣಿಗೆ ತಿಳಿಸುವ ಸೂಚ್ಯಂಕವು (ಪಿಎಂಐ) ಸತತ 16ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಮಟ್ಟದಲ್ಲಿಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.