ADVERTISEMENT

ಪಿಎಂಎಲ್‌ಎ ವ್ಯಾಪ್ತಿಗೆ ಕ್ರಿಪ್ಟೊ ವಹಿವಾಟು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 19:31 IST
Last Updated 8 ಮಾರ್ಚ್ 2023, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ (ರಾಯಿಟರ್ಸ್‌/ಪಿಟಿಐ): ಕ್ರಿಪ್ಟೊ ಕರೆನ್ಸಿಗಳಲ್ಲಿ ನಡೆಸುವ ವಹಿವಾಟಿಗೂ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಯಮಗಳು ಅನ್ವಯಿಸಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ವರ್ಚುವಲ್ ಡಿಜಿಟಲ್‌ ಆಸ್ತಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದಿರುವ ಕರೆನ್ಸಿಗಳ ನಡುವೆ ನಡೆಯುವ ವಿನಿಮಯ, ಒಂದು ಅಥವಾ ಅದಕ್ಕಿಂತಹ ಹೆಚ್ಚಿನ ಡಿಜಿಟಲ್‌ ಆಸ್ತಿಗಳ ಪರಸ್ಪರ ವಿನಿಮಯ ಹಾಗೂ ಡಿಜಿಟಲ್‌ ಆಸ್ತಿಗಳ ವರ್ಗಾವಣೆಯು ‘ಪಿಎಂಎಲ್‌ಎ’ ಅಡಿಯಲ್ಲಿ ಬರುತ್ತವೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದರಿಂದಾಗಿ ಭಾರತದ ಕ್ರಿಪ್ಟೊ ವಿನಿಮಯ ಕೇಂದ್ರಗಳು ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಹಣಕಾಸು ಗುಪ್ತಚರ ವಿಭಾಗಕ್ಕೆ ವರದಿ ನೀಡಬೇಕಾಗುತ್ತದೆ. ಡಿಜಿಟಲ್‌ ಆಸ್ತಿಗಳ ಸಂಗ್ರಹ ಅಥವಾ ಅವುಗಳಲ್ಲಿ ವಹಿವಾಟು ನಡೆಸುವುದು ಮತ್ತು ಡಿಜಿಟಲ್‌ ಆಸ್ತಿಗಳ ಮಾರಾಟಕ್ಕೆ ಸಂಬಂಧಿಸಿದ ಯಾವುದೇ ಹಣಕಾಸು ಸೇವೆಗಳಲ್ಲಿ ಭಾಗವಹಿಸುವುದು ಸಹ ‘ಪಿಎಂಎಲ್‌ಎ’ ವ್ಯಾಪ್ತಿಗೆ ಬರುತ್ತದೆ ಎಂದು ಕೇಂದ್ರ ಹೇಳಿದೆ.

ADVERTISEMENT

ಕ್ರಿಪ್ಟೊ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಭಾರತವು ಕಾನೂನು ಕ್ರಮಗಳನ್ನು ಅಂತಿಮಗೊಳಿಸಬೇಕಿದೆ. ಕ್ರಿಪ್ಟೊ ಕರೆನ್ಸಿಗಳು ವಂಚಕ ಯೋಜನೆಗಳಿಗೆ ಹೋಲುವುದರಿಂದ ಅವುಗಳನ್ನು ನಿಷೇಧಿಸಬೇಕು ಎಂದು ಆರ್‌ಬಿಐ ಈಗಾಗಲೇ ಹೇಳಿದೆ.

2022–23ನೇ ಸಾಲಿನ ಬಜೆಟ್‌ನಲ್ಲಿ, ಕ್ರಿಪ್ಟೊ ಕರೆನ್ಸಿಗಳ ವರ್ಗಾವಣೆಯಿಂದ ಬರುವ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ ವಿಧಿಸಲಾಗಿದೆ. ಒಂದು ವರ್ಷದಲ್ಲಿ ₹ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವರ್ಚುವಲ್‌ ಕರೆನ್ಸಿಗಳ ವರ್ಗಾವಣೆಯ ಮೇಲೆ ಶೇ 1ರಷ್ಟು ಟಿಡಿಎಸ್‌ ಮಾಡುವುದನ್ನು ಜಾರಿಗೊಳಿಸಲಾಗಿದೆ. ಕ್ರಿಪ್ಟೊ ಮತ್ತು ಡಿಜಿಟಲ್‌ ಸ್ವತ್ತನ್ನು ಉಡುಗೊರೆಯಾಗಿ ನೀಡುವುದಕ್ಕೂ ತೆರಿಗೆ ಕೊಡಬೇಕಾಗುತ್ತದೆ.

ಹೆಚ್ಚಿನ ಅಧಿಕಾರ
ನವದೆಹಲಿ:
ಪಿಎಂಎಲ್‌ಎ ನಿಯಮಗಳನ್ನು ಕ್ರಿಪ್ಟೊ ಕರೆನ್ಸಿಗಳಿಗೂ ವಿಸ್ತರಣೆ ಮಾಡುವುದರಿಂದ ಅವುಗಳನ್ನು ದೇಶದಾಚೆಗೆ ವರ್ಗಾವಣೆ ಮಾಡುವುದರ ಮೇಲೆ ನಿಗಾ ಇಡಲು ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಸಿಗಲಿದೆ.

ಕ್ರಿಪ್ಟೊ ಕರೆನ್ಸಿಗಳಿಂದ ಎದುರಾಗುವ ಅಪಾಯಗಳನ್ನು ತಡೆಯಲು ಜಾಗತಿಕ ಮಟ್ಟದಲ್ಲಿ ಒಪ್ಪಂದ ಆಗಬೇಕಿದೆ ಎಂದು ಭಾರತವು ಜಿ20 ಗುಂಪಿನ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.