ADVERTISEMENT

ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ರಾಯಿಟರ್ಸ್
Published 19 ಏಪ್ರಿಲ್ 2024, 14:26 IST
Last Updated 19 ಏಪ್ರಿಲ್ 2024, 14:26 IST
ಓಲಾ ಕ್ಯಾಬ್‌
ಓಲಾ ಕ್ಯಾಬ್‌   

ಮುಂಬೈ: ಹೂಡಿಕೆದಾರರಿಂದ ₹4,170 ಕೋಟಿ ಬಂಡವಾಳ ಸಂಗ್ರಹ ಮಾಡುವ ಉದ್ದೇಶದಿಂದ ಓಲಾ ಕ್ಯಾಬ್ಸ್‌ ಐಪಿಒ ಆರಂಭಿಸುವ ಕುರಿತು ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಬ್ಯಾಂಕರ್‌ಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬುದನ್ನು ಮೂರು ಪ್ರಮುಖ ಮೂಲಗಳು ಖಚಿತಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ಈ ಸಂಗ್ರಹಣೆ ಮೂಲಕ ಕಂಪನಿಯ ಒಟ್ಟು ಮೌಲ್ಯ ₹41,710 ಕೋಟಿಗೆ ಏರಿಕೆಯಾಗಲಿದೆ. ಸಾಫ್ಟ್‌ಬ್ಯಾಂಕ್ ಬೆಂಬಲಿತ ಓಲಾ ಕಂಪನಿಯು ನೂತನ ಪ್ರಸ್ತಾವನೆಗೆ ದೇಶದ ಷೇರು ನಿಯಂತ್ರಣ ಮಾರುಕಟ್ಟೆಗೆ ದಾಖಲೆಗಳನ್ನು ಸಲ್ಲಿಸುವ ಯೋಜನೆ ಹೊಂದಿದೆ ಎಂದು ಮೂಲಗಳು ತಿಳಿಸಿದ್ದು, ಹೆಸರು ಬಹಿರಂಗಪಡಿಸಲು ನಿರಾಕರಿಸಿವೆ. ಓಲಾ ಕೂಡಾ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದೆ.

ಸದ್ಯ ಕಂಪನಿಯು ಕೆಲ ಬ್ಯಾಂಕುಗಳೊಂದಿಗೆ ಸಮಾಲೋಚನೆ ನಡೆಸಿದೆ. ಇದರಲ್ಲಿ ಗೋಲ್ಡ್‌ಮನ್ ಸ್ಯಾಕ್ಸ್‌, ಬ್ಯಾಂಕ್ ಆಫ್ ಅಮೆರಿಕ, ಸಿಟಿ ಮತ್ತು ಭಾರತದ ಕೋಟಕ್ ಹಾಗೂ ಆ್ಯಕ್ಸಿಸ್ ಬ್ಯಾಂಕ್‌ ಜತೆ ಸಂಪರ್ಕದಲ್ಲಿದೆ. ಜತೆಗೆ ಐಪಿಒ ಸಲಹೆಗಾರರನ್ನು ತಿಂಗಳ ಒಳಗಾಗಿ ನೇಮಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ವರದಿಯಾಗಿದೆ.

ADVERTISEMENT

ಐಪಿಒ ಆರಂಭಿಸುವ ಪ್ರಕ್ರಿಯೆಯಲ್ಲಿರುವ ಓಲಾ ಕಂಪನಿಯ 2ನೇ ಪ್ರಯತ್ನ ಇದಾಗಿದೆ. 2021ರಲ್ಲಿ ₹8,341 ಕೋಟಿಯನ್ನು ಐಪಿಒ ಮೂಲಕ ಸಂಗ್ರಹಿಸಿತ್ತು. ಆಗ ಓಲಾದ ಒಟ್ಟು ಮೌಲ್ಯ ₹58,393 ಕೋಟಿಯಷ್ಟಿತ್ತು. ಆದರೆ ಅದರ ಹೂಡಿಕೆದಾರರಲ್ಲಿ ಒಬ್ಬರಾದ ವ್ಯಾನ್‌ಗಾರ್ಡ್ ಕಂಪನಿಯ ಮೌಲ್ಯವನ್ನು ₹15 ಸಾವಿರ ಕೋಟಿಯಷ್ಟು ಕಡಿತಗೊಳಿಸಿದ್ದರ ಪರಿಣಾಮ ಕಂಪನಿ ಮೌಲ್ಯ ಕುಸಿದಿತ್ತು. ಓಲಾ ಕಂಪನಿಯ ಇತರ ಪ್ರಮುಖ ಹೂಡಿಕೆದಾರರು ವಾರ್ಬರ್ಗ್‌ ಪಿಂಕಸ್‌, ಟೆಮಾಸೆಕ್‌ ಮತ್ತು ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್‌ ಆಗಿವೆ.

ಭವೀಶ್ ಅಗರ್ವಾಲ್ ಸಂಸ್ಥಾಪಕರಾಗಿರುವ ಓಲಾ ಈಗ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನೂ ತಯಾರಿಸುತ್ತಿದೆ. ಆದರೆ ಕ್ಯಾಬ್‌ ವ್ಯವಹಾರದಲ್ಲಿ ಓಲಾ ಕೆಲ ತಿಂಗಳುಗಳಿಂದ ನಿರಂತರ ನಷ್ಟ ಅನುಭವಿಸುತ್ತಿದೆ ಎಂದು ವರದಿಯಾಗಿದೆ. 2023ರ ಅಂತ್ಯದಲ್ಲಿ ನಷ್ಟದ ಮೊತ್ತ ಅರ್ಧಕ್ಕೂ ಹೆಚ್ಚು. ಹೀಗಾಗಿ ಬ್ರಿಟನ್, ಆಸ್ಟ್ರೇಲಿಯಾ ಹಾಗು ನ್ಯೂಜಿಲೆಂಡ್‌ ಸೇರಿದಂತೆ ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಘೋಷಣೆಯು ಕಳೆದ ವಾರ ಕಂಪನಿಯಿಂದ ಹೊರಬಿದ್ದಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.