ADVERTISEMENT

ದುಪ್ಪಟ್ಟಾದ ತಲಾ ಆದಾಯ: ಸವಾಲಾಗಿ ಉಳಿದ ಆದಾಯದ ಅಸಮಾನ ಹಂಚಿಕೆ

ಪಿಟಿಐ
Published 5 ಮಾರ್ಚ್ 2023, 19:32 IST
Last Updated 5 ಮಾರ್ಚ್ 2023, 19:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ ತಲಾ ಆದಾಯವು 2014–15ರ ನಂತರದಲ್ಲಿ, ಅಂದರೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದುಪ್ಪಟ್ಟಾಗಿದೆ. ಆದರೆ ಆದಾಯ ಹಂಚಿಕೆಯಲ್ಲಿನ ಅಸಮಾನತೆಯು ಸವಾಲಾಗಿಯೇ ಉಳಿದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ವರದಿ ತಿಳಿಸಿದೆ.

2014–15ರಲ್ಲಿ ತಲಾ ಆದಾಯವು ಹಾಲಿ ದರಗಳ ಲೆಕ್ಕಾಚಾರದಲ್ಲಿ (ಹಣದುಬ್ಬರದ ಪರಿಣಾಮವನ್ನು ಪರಿಗಣಿಸದೇ ಇದ್ದಾಗ) ₹ 88,647 ಇದ್ದಿದ್ದು 2022–23ರಲ್ಲಿ ₹ 1.71 ಲಕ್ಷಕ್ಕೆ ಏರಿಕೆ ಆಗಿದೆ. ಅಂದರೆ, ತಲಾ ಆದಾಯವು ಶೇಕಡ 99ರಷ್ಟು ಹೆಚ್ಚಾದಂತಾಗಿದೆ.

ಸ್ಥಿರ ದರಗಳ ಲೆಕ್ಕಾಚಾರದಲ್ಲಿ (ಹಣದುಬ್ಬರದ ಪರಿಣಾಮವನ್ನು ಪರಿಗಣಿಸಿದಾಗ) ನೋಡುವುದಾದರೆ ತಲಾ ಆದಾಯವು 2014–15ರಲ್ಲಿ ₹ 72,805 ಇತ್ತು. ಅದು 2022–23ರಲ್ಲಿ ₹ 98,118ಕ್ಕೆ, ಅಂದರೆ ಶೇ 35ರಷ್ಟು, ಏರಿಕೆ ಕಂಡಿದೆ.

ADVERTISEMENT

ಜಿಡಿಪಿಯನ್ನು ಹಾಲಿ ದರಗಳ ಲೆಕ್ಕಾಚಾರದಲ್ಲಿ ನೋಡಲಾಗುತ್ತಿದೆ. ಆದರೆ, ಹಣದುಬ್ಬರವನ್ನು ಪರಿಗಣಿಸಿದರೆ ಹೆಚ್ಚಳದ ಪ್ರಮಾಣವು ತುಂಬಾ ಕಡಿಮೆ ಇದೆ ಎಂದು ತಲಾ ಆದಾಯ ದುಪ್ಪಟ್ಟಾಗಿರುವ ಕುರಿತು ಆರ್ಥಿಕ ತಜ್ಞೆ ಜಯತಿ ಘೋಷ್‌ ಪ್ರತಿಕ್ರಿಯೆ ನೀಡಿದ್ದಾರೆ.

ಆದಾಯದಲ್ಲಿ ಆಗಿರುವ ಏರಿಕೆಯ ಬಹುಪಾಲು, ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಂಚೂಣಿಯಲ್ಲಿ ಇರುವ ಶೇ 10ರಷ್ಟು ಮಂದಿಗೆ ಸೇರಿದೆ. ಇದಕ್ಕೆ ಪ್ರತಿಯಾಗಿ, ಆದಾಯದ ಶ್ರೇಣಿಯಲ್ಲಿ ನಡುವಿನಲ್ಲಿ ಬರುವವರ ಆದಾಯವು ಇಳಿಕೆ ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಎನ್‌ಎಸ್‌ಒ ಅಂಕಿ–ಅಂಶಗಳ ಪ್ರಕಾರ, ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಹಾಲಿ ಮತ್ತು ಸ್ಥಿರ ದರಗಳೆರಡರ ಲೆಕ್ಕಾಚಾರದಲ್ಲಿಯೂ ತಲಾ ಆದಾಯ ಇಳಿಕೆ ಕಂಡಿದೆ. ಆದರೆ, 2021–22 ಮತ್ತು 2022–23ರಲ್ಲಿ ಏರಿಕೆ ಹಾದಿಗೆ ಮರಳಿದೆ.

ಜಾಗತಿಕ ಅಭಿವೃದ್ಧಿ ಸೂಚ್ಯಂಕದ ಅಂಕಿ–ಅಂಶಗಳ ಪ್ರಕಾರ, ಭಾರತದ ತಲಾ ಆದಾಯದ ಸರಾಸರಿ ಬೆಳವಣಿಗೆಯು ಸ್ಥಿರ ದರಗಳ ಲೆಕ್ಕದಲ್ಲಿ 2014ರಿಂದ 2019ರವರೆಗಿನ ಅವಧಿಯಲ್ಲಿ ವಾರ್ಷಿಕ ಶೇ 5.6ರಷ್ಟು ಆಗಿದೆ ಎಂದು ಆರ್ಥಿಕ ಸಂಶೋಧನಾ ಸಂಸ್ಥೆ ಎನ್‌ಐಪಿಇಎಫ್‌ನ ಮಾಜಿ ನಿರ್ದೇಶಕ ಪಿನಾಕಿ ಚಕ್ರವರ್ತಿ ಹೇಳಿದ್ದಾರೆ.

*
ತಲಾ ಆದಾಯವು ಭಾರತೀಯರ ಸರಾಸರಿ ಆದಾಯ ಆಗಿದೆ. ಇದು ಆದಾಯದ ಅಸಮಾನ ಹಂಚಿಕೆಯನ್ನು ಮರೆಮಾಚುತ್ತದೆ.
-ನಾಗೇಶ್‌ ಕುಮಾರ್, ಇನ್‌ಸ್ಟಿಟ್ಯೂಟ್‌ ಫಾರ್‌ ಸ್ಟಡೀಸ್‌ ಇನ್‌ ಇಂಡಸ್ಟ್ರಿಯಲ್‌ ಡೆವಲಪ್‌ಮೆಂಟ್‌ (ಐಎಸ್‌ಐಡಿ) ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.