ನವದೆಹಲಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಭತ್ತ ಬಿತ್ತನೆ ಪ್ರದೇಶ ಕಡಿಮೆ ಆಗಿರುವುದರಿಂದ ಅಕ್ಕಿ ಉತ್ಪಾದನೆಯು ಗರಿಷ್ಠ 1.2 ಕೋಟಿ ಟನ್‌ವರೆಗೆ ಕಡಿಮೆ ಆಗಬಹುದು ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
ಹಲವು ರಾಜ್ಯಗಳಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಮುಂಗಾರು ಹಂಗಾಮು ಅವಧಿಯಲ್ಲಿ ಇಲ್ಲಿಯವರೆಗೆ ಆಗಿರುವ ಭತ್ತ ಬಿತ್ತನೆಯ ಪ್ರದೇಶವು ಶೇಕಡ 38ರಷ್ಟು ಕಡಿಮೆ ಇದೆ. ಹೀಗಾಗಿ ಅಕ್ಕಿ ಉತ್ಪಾದನೆ ಕಡಿಮೆ ಆಗುವ ಅಂದಾಜು ಮಾಡಲಾಗಿದೆ. ಹೀಗಿದ್ದರೂ, ದೇಶಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯ ಉತ್ಪಾದನೆ ಆಗಲಿದೆ ಎಂದು ಅವರು ವಿವರಿಸಿದ್ದಾರೆ.
ಬಿತ್ತನೆ ಪ್ರದೇಶದಲ್ಲಿ ಆಗಿರುವ ಇಳಿಕೆ ಮತ್ತು ಸರಾಸರಿ ಇಳುವರಿಯಲ್ಲಿ ಆಗಬಹುದಾದ ಇಳಿಕೆಯ ಆಧಾರದ ಮೇಲೆ ಪ್ರಾಥಮಿಕವಾಗಿ ಈ ಅಂದಾಜು ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಳೆ ಪ್ರಮಾಣ ಚೆನ್ನಾಗಿರುವ ರಾಜ್ಯಗಳಲ್ಲಿ ಉತ್ತಮ ಇಳುವರಿ ಬರುವ ನಿರೀಕ್ಷೆ ಮಾಡಲಾಗಿದ್ದು, ಒಟ್ಟು ಉತ್ಪಾದನೆಯಲ್ಲಿ ಆಗಬಹುದಾದ ಇಳಿಕೆಯ ಪ್ರಮಾಣ ಕಡಿಮೆ ಇರುವ ನಿರೀಕ್ಷೆ ಇದೆ ಎಂದು ಪಾಂಡೆ ತಿಳಿಸಿದ್ದಾರೆ.
‘ಅಕ್ಕಿ ಉತ್ಪಾದನೆಯು 1 ಕೋಟಿ ಟನ್‌ನಷ್ಟು ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ. ಪರಿಸ್ಥಿತಿ ತೀರಾ ಕೆಟ್ಟದ್ದಾಗಿದ್ದರೆ ಉತ್ಪಾದನೆಯು 1.2 ಕೋಟಿ ಟನ್‌ನಷ್ಟು ಕೂಡ ಕಡಿಮೆ ಆಗಬಹುದು’ ಎಂದು ಅವರು ಹೇಳಿದ್ದಾರೆ.
2021–22ನೇ ಬೆಳೆ ವರ್ಷದಲ್ಲಿ ಒಟ್ಟು ಅಕ್ಕಿ ಉತ್ಪಾದನೆಯು 13.02 ಕೋಟಿ ಟನ್ ಆಗುವ ಅಂದಾಜು ಮಾಡಲಾಗಿದೆ. ಇದು, ಕಳೆದ ಐದು ವರ್ಷಗಳ ಸರಾಸರಿ ಉತ್ಪಾದನೆಯಾದ 11.64 ಕೋಟಿ ಟನ್‌ಗೆ ಹೋಲಿಸಿದರೆ ಶೇ 13.85 ರಷ್ಟು ಹೆಚ್ಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.