ನವದೆಹಲಿ: ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಶೇ 11.8ರಷ್ಟು ಹೆಚ್ಚಾಗಿದ್ದು, ಪ್ರತಿ ದಿನಕ್ಕೆ 15.4 ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಆದರೆ, ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಆಮದು ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಶೇ 22ರಷ್ಟು ಇಳಿಕೆ ಆಗಿದ್ದು, ದಿನಕ್ಕೆ 5.27 ಲಕ್ಷ ಬ್ಯಾರಲ್‌ನಷ್ಟು ಆಗಿದೆ.
ಭಾರತವು ಕಳೆದ ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಆಮದು ಮಾಡಿಕೊಂಡಿರುವುದರಲ್ಲಿ ರಷ್ಯಾದ ಪಾಲು ಶೇ 17ರಷ್ಟು ಇತ್ತು. ಅದು ಈ ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಶೇ 40ಕ್ಕೆ ಏರಿಕೆ ಕಂಡಿದೆ. ಅಮೆರಿಕದಿಂದ ಆಮದು ಪ್ರಮಾಣವು ಶೇ 2.8 ರಿಂದ ಶೇ 3.2ಕ್ಕೆ ಅಲ್ಪ ಏರಿಕೆ ಕಂಡಿದೆ.
ಮಧ್ಯಪ್ರಾಚ್ಯದಿಂದ ಆಗುವ ತೈಲದ ಆಮದು ಶೇ 60 ಇದ್ದಿದ್ದು ಶೇ 44ಕ್ಕೆ ಇಳಿಕೆ ಕಂಡಿದೆ. ಭಾರತವು ಕಳೆದ ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಪ್ರತಿ ದಿನಕ್ಕೆ 45 ಲಕ್ಷ ಬ್ಯಾರಲ್‌ನಷ್ಟು ತೈಲ ಆಮದು ಮಾಡಿಕೊಂಡಿತ್ತು. ಈ ವರ್ಷದ ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಆಮದು ಪ್ರಮಾಣ ಶೇ 1.6ರಷ್ಟು ಇಳಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.