ನವದೆಹಲಿ: ಉತ್ತಮ ಆರ್ಥಿಕ ಪರಿಸ್ಥಿತಿಗಳು ಮತ್ತು ದೃಢವಾದ ಬೇಡಿಕೆಯಿಂದ ಸೇವಾ ವಲಯದ ಬೆಳವಣಿಗೆ 14 ವರ್ಷಗಳಲ್ಲಿ ಅತ್ಯಂತ ವೇಗವಾಗಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಇಂಡಿಯಾ ಸಂಸ್ಥೆಯ ಮಾಸಿಕ ಸಮೀಕ್ಷೆ ವರದಿ ತಿಳಿಸಿದೆ. ಆದರೆ, ಕ್ಷೇತ್ರದ ಬೆಳವಣಿಗೆಯು ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಅಲ್ಪ ಇಳಿಕೆಯಾಗಿದೆ.
ಸೇವಾ ವಲಯದ ಚಟುವಟಿಕೆಯನ್ನು ಸೂಚಿಸುವ ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಬ್ಯುಸಿನೆಸ್ ಸೂಚ್ಯಂಕವು ಮಾರ್ಚ್‌ನಲ್ಲಿ 61.2 ಇತ್ತು. ಏಪ್ರಿಲ್‌ನಲ್ಲಿ 60.8ಕ್ಕೆ ಇಳಿಕೆಯಾಗಿದೆ.
ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು (ಪಿಎಂಐ) 50ರ ಮೇಲಿದ್ದರೆ ಬೆಳವಣಿಗೆಯು ಸದೃಢವಾಗಿದೆ ಎಂದರ್ಥ. 50ಕ್ಕಿಂತ ಕಡಿಮೆ ಇದ್ದರೆ ಬೆಳವಣಿಗೆಯು ಕುಂಠಿತವಾಗಿರುವ ಸೂಚನೆಯಾಗಿದೆ.
ಹೆಚ್ಚಿನ ಬೇಡಿಕೆಗಳ ಕಾರಣಕ್ಕೆ ಏಪ್ರಿಲ್‌ನಲ್ಲಿ ದೇಶದ ಸೇವಾ ಕ್ಷೇತ್ರವು ಹೆಚ್ಚಿನ ಬೆಳವಣಿಗೆ ದಾಖಲಿಸಿತು ಎಂದು ಎಚ್‌ಎಸ್‌ಬಿಸಿಯ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ಹೇಳಿದರು.
ಹೆಚ್ಚಿದ ಹೊಸ ಬೇಡಿಕೆಗಳಿಂದಾಗಿ ಸಂಸ್ಥೆಗಳು ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿದವು. ಆದರೂ ನೇಮಕಾತಿ ಬೆಳವಣಿಗೆಯ ವೇಗವು ಕ್ಷೀಣಿಸಿತು. ಮಾರ್ಚ್‌ಗಿಂತ ನಿಧಾನವಾಗಿಯಾದರೂ ಉತ್ಪಾದನಾ ವೆಚ್ಚಗಳು ಏರಿಕೆಯಾಗುತ್ತಲೇ ಇದ್ದವು ಎಂದು ತಿಳಿಸಿದ್ದಾರೆ.
ಮಾರುಕಟ್ಟೆ ತಂತ್ರಗಳು ಮತ್ತು ದಕ್ಷತೆ, ಸ್ಪರ್ಧಾತ್ಮಕ ಬೆಲೆಗಳು ಮತ್ತು ಬೇಡಿಕೆಯು ಅನುಕೂಲಕರವಾಗಿ ಉಳಿಯುವ ಮುನ್ಸೂಚನೆ, ಆಶಾವಾದವನ್ನು ಹೆಚ್ಚಿಸಿವೆ ಎಂದು ಸಮೀಕ್ಷೆ ಹೇಳಿದೆ.
ಸೇವಾ ವಲಯದ ಸೂಚ್ಯಂಕ
ತಿಂಗಳು; ಸೂಚ್ಯಂಕ
2023–ಏಪ್ರಿಲ್; 62.0
ಮೇ; 61.2
ಜೂನ್; 58.5
ಜುಲೈ; 62.3
ಆಗಸ್ಟ್; 60.1
ಸೆಪ್ಟೆಂಬರ್; 61.0
ಅಕ್ಟೋಬರ್;58.4
ನವೆಂಬರ್; 56.9
ಡಿಸೆಂಬರ್; 59.0
2024; ಜನವರಿ; 61.8
ಫೆಬ್ರುವರಿ;60.6
ಮಾರ್ಚ್;61.2
ಏಪ್ರಿಲ್;60.8
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.