ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಆಗಸ್ಟ್ ತಿಂಗಳಲ್ಲಿ ತುಸು ಇಳಿಕೆ ಕಂಡಿದೆ. ಜುಲೈನಲ್ಲಿ 62.3ರಷ್ಟು ಇದ್ದ ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಇಂಡೆಕ್ಸ್ ಆಗಸ್ಟ್‌ನಲ್ಲಿ 60.1ಕ್ಕೆ ಇಳಿಕೆ ಕಂಡಿದೆ.
ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ, ಅದನ್ನು ಕುಸಿತವೆಂದು ಅರ್ಥೈಸಲಾಗುತ್ತದೆ.
‘ಭಾರತದ ಸೇವಾ ವಲಯದ ಕಂಪನಿಗಳು ಆಗಸ್ಟ್ ತಿಂಗಳಲ್ಲಿ ಗುರುತರ ಮೈಲಿಗಲ್ಲನ್ನು ದಾಟಿವೆ. ರಫ್ತು ವಹಿವಾಟಿನಲ್ಲಿ ಅವು ದಾಖಲೆಯ ಏರಿಕೆಯನ್ನು ಕಂಡಿವೆ. ಏಷ್ಯಾ ಪೆಸಿಫಿಕ್, ಯುರೋಪ್, ಉತ್ತರ ಅಮೆರಿಕ ಮತ್ತು ಮಧ್ಯಪ್ರಾಚ್ಯದಿಂದ ಹೆಚ್ಚಿನ ಬೇಡಿಕೆ ಬಂದಿದೆ’ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ.
‘ಬೇಡಿಕೆ ಹೆಚ್ಚಾಗಿದ್ದುದು ಮುನ್ನೋಟದ ಬಗ್ಗೆ ಆಶಾವಾದ ಹೆಚ್ಚುವಂತೆ ಮಾಡಿದೆ. ಇದು ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದು’ ಎಂದು ಲಿಮಾ ಹೇಳಿದ್ದಾರೆ. ಆಗಸ್ಟ್‌ನಲ್ಲಿ ಸೇವಾ ವಲಯದಲ್ಲಿ ಹೊಸಬರ ನೇಮಕ ಕೂಡ ಹೆಚ್ಚಾಗಿದೆ. ಉದ್ಯೋಗ ಸೃಷ್ಟಿಯ ಪ್ರಮಾಣವು ಕಳೆದ ನವೆಂಬರ್ ನಂತರದ ಅತಿ ಹೆಚ್ಚಿನದ್ದಾಗಿದೆ.
ಸೇವಾ ವಲಯದ ಹಾಗೂ ತಯಾರಿಕಾ ವಲಯದ ಚಟುವಟಿಕೆಗಳನ್ನು ಒಟ್ಟಾಗಿ ಹೇಳುವ ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಕಾಂಪೊಸಿಟ್ ಪಿಎಂಐ ಔಟ್‌ಪುಟ್ ಸೂಚ್ಯಂಕವು ಜುಲೈನಲ್ಲಿ 61.9 ಇದ್ದಿದ್ದು, ಆಗಸ್ಟ್‌ನಲ್ಲಿ 60.9ಕ್ಕೆ ಇಳಿಕೆ ಕಂಡಿದೆ. ಹೀಗಿದ್ದರೂ 12 ವರ್ಷಗಳಲ್ಲಿ ದಾಖಲಾಗಿರುವ ಅತ್ಯಂತ ವೇಗದ ಬೆಳವಣಿಗೆ ದರಗಳ ಪೈಕಿ ಇದೂ ಒಂದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.