ನವದೆಹಲಿ/ಬೆಂಗಳೂರು: ದೇಶದ ಸೇವಾ ವಲಯದ ಚಟುವಟಿಕೆಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದು, 13 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಇಂಡಿಯಾ ಸಂಸ್ಥೆ ತಿಳಿಸಿದೆ.
ಹೊಸ ವಹಿವಾಟುಗಳಿಗೆ ಬೇಡಿಕೆಯು ತೀವ್ರ ಗತಿಯಲ್ಲಿ ಹೆಚ್ಚಾಗಿದೆ. ಇದರ ಜೊತೆಗೆ ಉದ್ಯೋಗ ಸೃಷ್ಟಿಯೂ ಹೆಚ್ಚಾಗುತ್ತಿರುವುದರಿಂದ ಒಟ್ಟಾರೆ ವಹಿವಾಟಿನಲ್ಲಿ ಈ ಮಟ್ಟದ ಬೆಳವಣಿಗೆ ಕಂಡುಬಂದಿದೆ ಎಂದು ಅದು ಹೇಳಿದೆ.
ಸೇವಾ ವಲಯದ ಚಟುವಟಿಕೆಗಳನ್ನು ತಿಳಿಸುವ ಸರ್ವಿಸಸ್ ಪಿಎಂಐ ಬಿಸಿನೆಸ್ ಆ್ಯಕ್ಟಿವಿಟಿ ಇಂಡೆಕ್ಸ್ ಆಗಸ್ಟ್‌ನಲ್ಲಿ 60.1ರಷ್ಟು ಇದ್ದಿದ್ದು ಸೆಪ್ಟೆಂಬರ್‌ನಲ್ಲಿ 61ಕ್ಕೆ ಏರಿಕೆ ಆಗಿದೆ. 2010ರ ಜೂನ್ ನಂತರ ಎರಡನೇ ವೇಗದ ಬೆಳವಣಿಗೆ ಇದಾಗಿದೆ.
ಸೇವಾ ವಲಯದ 400 ಕಂಪನಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಈ ವರದಿಯನ್ನು ಸಂಸ್ಥೆಯು ನೀಡಿದೆ. ಸೂಚ್ಯಂಕವು 50ರ ಮಟ್ಟಕ್ಕಿಂತಲೂ ಹೆಚ್ಚಿಗೆ ಇದ್ದರೆ ಅದನ್ನು ಸಕಾರಾತ್ಮಕ ಬೆಳವಣಿಗೆ, 50ಕ್ಕಿಂತಲೂ ಕಡಿಮೆ ಇದ್ದರೆ ನಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.
ಒಟ್ಟಾರೆ ವಹಿವಾಟು ಏರಿಕೆ ಆಗುತ್ತಿರುವ ಜೊತೆಗೆ, ಜಾಗತಿಕ ಮಾರುಕಟ್ಟೆಯಲ್ಲಿಯೂ ಭಾರತದ ಸೇವೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕದಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಸಂಸ್ಥೆಯು ಮಾಹಿತಿ ನೀಡಿದೆ.
ವಲಯದ ಮುನ್ನೋಟದಲ್ಲಿಯೂ ಸುಧಾರಣೆ ಕಂಡುಬಂದಿದೆ. ಕಂಪನಿಗಳ ವಹಿವಾಟು ನಡೆಸುವ ವಿಶ್ವಾಸವು 9 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಈ ವರ್ಷದ ಮುಂಬರುವ ದಿನಗಳಲ್ಲಿಯೂ ಮಾರುಕಟ್ಟೆ ಸ್ಥಿತಿಯು ಉತ್ತಮವಾಗಿ ಇರುವ ಮತ್ತು ಬೇಡಿಕೆಯು ಏರುಗತಿಯಲ್ಲಿ ಸಾಗುವ ನಿರೀಕ್ಷೆಯನ್ನು ಕಂಪನಿಗಳು ಹೊಂದಿವೆ.
‘ಸೇವೆಗಳ ಮೇಲಿನ ವೆಚ್ಚವು ನಿಧಾನಗತಿಯಲ್ಲಿ ಏರಿಕೆ ಕಂಡಿದ್ದು, ಎರಡೂವರೆ ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ. ಅಲ್ಪಾವಧಿಯಲ್ಲಿ ಹಣದುಬ್ಬರ ತುಸು ಇಳಿಕೆ ಆಗಬಹುದು, ಆದರೆ, ಎಲ್‌ನಿನೊ ಪರಿಣಾಮದಿಂದಾಗಿ ಆಹಾರ ವಸ್ತುಗಳ ದರ ಏರಿಕೆ ಆಗುವ ಸಾಧ್ಯತೆ ಇದ್ದು, ಆರ್‌ಬಿಐ ಮುಂದಿನ ವರ್ಷದವರೆಗೂ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ತಿಳಿಸಿದ್ದಾರೆ.
ತಯಾರಿಕೆ ಮತ್ತು ಸೇವಾ ವಲಯಗಳ ಒಟ್ಟು ಬೆಳವಣಿಗೆಯನ್ನು ತಿಳಿಸುವ ಕಂಪೋಸಿಟ್ ಪಿಎಂಐ ಔಟ್‌ಪುಟ್ ಇಂಡೆಕ್ಸ್ ಆಗಸ್ಟ್‌ನಲ್ಲಿ 60.9 ಇದ್ದಿದ್ದು ಸೆಪ್ಟೆಂಬರ್‌ನಲ್ಲಿ 61ಕ್ಕೆ ಏರಿಕೆ ಕಂಡಿದೆ. ಭಾರತದ ಸರಕು ಮತ್ತು ಸೇವೆಗಳಿಗೆ ಬೇಡಿಕೆಯು 13 ವರ್ಷಗಳಲ್ಲಿಯೇ ಎರಡನೇ ವೇಗದ ಬೆಳವಣಿಗೆ ಕಂಡಿದೆ ಎಂದೂ ಎಸ್ ಆ್ಯಂಡ್ ಪಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.