ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಜುಲೈ ತಿಂಗಳಲ್ಲಿ ತುಸು ಇಳಿಕೆ ಕಂಡಿದೆ ಎಂದು ಸೋಮವಾರ ಬಿಡುಗಡೆಯಾಗಿರುವ ಎಸ್ ಆ್ಯಂಡ್ ಪಿ ಗ್ಲೋಬಲ್ ಇಂಡಿಯಾ ಸಂಸ್ಥೆಯ ವರದಿ ತಿಳಿಸಿದೆ.
ಸೇವಾ ವಲಯದ ಚಟುವಟಿಕೆಗಳನ್ನು ಸೂಚಿಸುವ ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಬ್ಯುಸಿನೆಸ್ ಸೂಚ್ಯಂಕವು, ಜೂನ್ ತಿಂಗಳಿನಲ್ಲಿ 60.5 ದಾಖಲಾಗಿತ್ತು. ಇದು ಜುಲೈ ತಿಂಗಳಲ್ಲಿ 60.3ಕ್ಕೆ ಇಳಿದಿದೆ.
ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು (ಪಿಎಂಐ) 50ರ ಮೇಲಿದ್ದರೆ ಬೆಳವಣಿಗೆಯು ಸಶಕ್ತವಾಗಿದೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಬೆಳವಣಿಗೆಯು ಕುಂಠಿತವಾಗಿದೆ ಎಂದರ್ಥ.
‘ಉತ್ಪಾದನೆ ವೆಚ್ಚದ ಏರಿಕೆಯಿಂದ ಜುಲೈನಲ್ಲಿ ದೇಶದ ಸೇವಾ ವಲಯದ ಚಟುವಟಿಕೆ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಆದರೂ, ದೇಶೀಯ ಬೇಡಿಕೆಯಿಂದ ಹೊಸ ವ್ಯಾಪಾರವು ಹೆಚ್ಚಾಗುತ್ತಿದೆ. ಸೇವಾ ವಲಯದ ಸಂಸ್ಥೆಗಳು ಆಶಾದಾಯಕವಾಗಿವೆ’ ಎಂದು ಎಚ್‌ಎಸ್‌ಬಿಸಿಯ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ಹೇಳಿದ್ದಾರೆ.
ಜಗತ್ತಿನೆಲ್ಲೆಡೆ ಭಾರತದ ಸೇವಾ ಚಟುವಟಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಸ್ಟ್ರೇಲಿಯಾ, ಬ್ರೆಜಿಲ್, ಚೀನಾ, ಜಪಾನ್, ಸಿಂಗಪುರ, ನೆದರ್ಲೆಂಡ್ಸ್ ಮತ್ತು ಅಮೆರಿಕಕ್ಕೆ ರಫ್ತು ಪ್ರಮಾಣ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ಉತ್ತಮ ಆರ್ಥಿಕ ಪರಿಸ್ಥಿತಿ ಮತ್ತು ಉತ್ಪಾದನೆಯ ಆಶಾದಾಯಕ ನಿರೀಕ್ಷೆಯು ಸೇವಾ ವಲಯದ ನೇಮಕಾತಿಗೆ ಹೆಚ್ಚಳಕ್ಕೆ ಕಾರಣವಾಯಿತು. ಸೇವಾ ಪೂರೈಕೆದಾರರು ಮುಂಬರುವ 12 ತಿಂಗಳಲ್ಲಿ ವ್ಯಾಪಾರ ಚಟುವಟಿಕೆಯಲ್ಲಿ ಏರಿಕೆಯಾಗುವ ವಿಶ್ವಾಸವನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ.
ಉತ್ಪಾದನಾ ಸೂಚ್ಯಂಕ ಇಳಿಕೆ:
ಎಚ್‌ಎಸ್‌ಬಿಸಿ ಇಂಡಿಯಾ ಕಾಂಪೊಸಿಟ್ ಉತ್ಪಾದನಾ ಸೂಚ್ಯಂಕವೂ ಇಳಿಕೆ ಕಂಡಿದೆ. ಜೂನ್‌ನಲ್ಲಿ 60.9 ಇದ್ದ ಸೂಚ್ಯಂಕ, ಜುಲೈನಲ್ಲಿ 60.7ಕ್ಕೆ ಇಳಿದಿದೆ. ಸತತ 36ನೇ ತಿಂಗಳೂ ಸೂಚ್ಯಂಕವು 50ಕ್ಕಿಂತ ಹೆಚ್ಚಿದೆ.
ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಹೊಸ ಬೇಡಿಕೆಗಳು ಹೆಚ್ಚಾದವು. ಇದು ನೇಮಕಾತಿ ಹೆಚ್ಚಳಕ್ಕೆ ಕಾರಣವಾಯಿತು. ಹೆಚ್ಚಿದ ವೇತನ ಮತ್ತು ವಸ್ತುಗಳ ಬೆಲೆ ಏರಿಕೆಯಿಂದ ತಯಾರಿಕಾ ವೆಚ್ಚವು ಮತ್ತಷ್ಟು ಹೆಚ್ಚಳವಾಯಿತು. ಇದರ ಪರಿಣಾಮ ಉತ್ಪಾದನೆ ಬೆಲೆಯು 11 ವರ್ಷದಲ್ಲಿ ಅತಿ ವೇಗವಾಗಿ ಏರಿತು ಎಂದು ಭಂಡಾರಿ ಹೇಳಿದ್ದಾರೆ.
ಸೇವಾ ವಲಯದ 400 ಕಂಪನಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.