ADVERTISEMENT

ಸೇವಾ ವಲಯದ ಚಟುವಟಿಕೆ ಚುರುಕು

ಹೊಸ ಬೇಡಿಕೆಗಳ ಹೆಚ್ಚಳದಿಂದ ಸೂಚ್ಯಂಕ ಏರಿಕೆ: ಬಿರುಸುಗೊಂಡ ನೇಮಕಾತಿ

ಪಿಟಿಐ
Published 3 ಜುಲೈ 2024, 14:06 IST
Last Updated 3 ಜುಲೈ 2024, 14:06 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಜೂನ್‌ ತಿಂಗಳಲ್ಲಿ ಚುರುಕುಗೊಂಡಿವೆ ಎಂದು ಮಾಸಿಕ ಸಮೀಕ್ಷೆ ವರದಿ ಬುಧವಾರ ಹೇಳಿದೆ.

ಸೇವಾ ವಲಯದ ಚಟುವಟಿಕೆಗಳನ್ನು ಸೂಚಿಸುವ ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್‌ ಬ್ಯುಸಿನೆಸ್‌ ಸೂಚ್ಯಂಕವು, ಮೇ ತಿಂಗಳಿನಲ್ಲಿ 60.2 ದಾಖಲಾಗಿತ್ತು. ಇದು ಜೂನ್‌ ತಿಂಗಳಲ್ಲಿ 60.5ಕ್ಕೆ ಏರಿಕೆಯಾಗಿದೆ. ಸೇವಾ ವಲಯದ ಚಟುವಟಿಕೆಗಳು ಮೇ ತಿಂಗಳಿನಲ್ಲಿ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿತ್ತು.

ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು (ಪಿಎಂಐ) 50ರ ಮೇಲಿದ್ದರೆ ಬೆಳವಣಿಗೆಯು ಸಶಕ್ತವಾಗಿದೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಬೆಳವಣಿಗೆಯು ಕುಂಠಿತವಾಗಿದೆ ಎಂದರ್ಥ.  

ADVERTISEMENT

ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಬೇಡಿಕೆಗಳು ಹೆಚ್ಚಿದ್ದರಿಂದ ಜೂನ್‌ನಲ್ಲಿ ದೇಶದ ಸೇವಾ ವಲಯದ ಚಟುವಟಿಕೆಯ ಬೆಳವಣಿಗೆಗೆ ವೇಗ ದೊರಕಿದೆ ಎಂದು ಎಚ್‌ಎಸ್‌ಬಿಸಿಯ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್‌ ಭಂಡಾರಿ ಹೇಳಿದ್ದಾರೆ. ಈ ಚಟುವಟಿಕೆಗಳ ಏರಿಕೆಯು ಸೇವಾ ಸಂಸ್ಥೆಗಳು ತಮ್ಮ ಸಿಬ್ಬಂದಿ ನೇಮಕಾತಿಯ ಹೆಚ್ಚಳಕ್ಕೆ ಉತ್ತೇಜನ ನೀಡಿತು ಎಂದು ತಿಳಿಸಿದ್ದಾರೆ.

ಸದೃಢ ಬೇಡಿಕೆ ಮತ್ತು ಹೊಸ ವ್ಯಾಪಾರವು ಸೂಚ್ಯಂಕದ ಏರಿಕೆಗೆ ಕಾರಣವಾಗಿದೆ. ದೇಶೀಯ ಸೇವಾ ಪೂರೈಕೆದಾರರಿಂದ ಹೊಸ ಬೇಡಿಕೆಗಳ ಸ್ವೀಕಾರವು ಜೂನ್‌ನಲ್ಲಿ ಹೆಚ್ಚಾಗುತ್ತಲೇ ಇದೆ. ಏಷ್ಯಾ, ಆಸ್ಟ್ರೇಲಿಯಾ, ಯುರೋಪ್‌, ಲ್ಯಾಟಿನ್‌ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಅಮೆರಿಕದಿಂದಲೂ ಹೊಸ ಬೇಡಿಕೆಗಳಲ್ಲಿ  ಏರಿಕೆಯಾಗಿದೆ ಎಂದು ತಿಳಿಸಿದೆ.

ಆಹಾರ, ಇಂಧನ ಮತ್ತು ಕಾರ್ಮಿಕ ವೆಚ್ಚ ಹೆಚ್ಚಳದ ಕಾರಣದಿಂದಾಗಿ ಸೇವಾ ಪೂರೈಕೆದಾರರು ತಮ್ಮ ಸರಾಸರಿ ವೆಚ್ಚದಲ್ಲಿ ಮಧ್ಯಮ ಹೆಚ್ಚಳವನ್ನು ದಾಖಲಿಸಿದ್ದಾರೆ. ಫೆಬ್ರುವರಿಯಿಂದ ಮಾರಾಟ ದರವು ನಿಧಾನಗತಿಯಲ್ಲಿ ಏರಿತು ಎಂದು ವರದಿ ತಿಳಿಸಿದೆ.

ತಯಾರಿಕಾ ವೆಚ್ಚವು ಮಂದಗತಿಯಲ್ಲಿ ಏರಿಕೆಯಾಗಿದೆ. ಇದರಿಂದ ಉತ್ಪಾದನಾ ವೆಚ್ಚವು ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಸೇವಾ ಪೂರೈಕೆದಾರರು ಮುಂಬರುವ 12 ತಿಂಗಳಲ್ಲಿ ವ್ಯಾಪಾರ ಚಟುವಟಿಕೆಯಲ್ಲಿ ಏರಿಕೆಯಾಗುವ ವಿಶ್ವಾಸವನ್ನು ಹೊಂದಿದ್ದಾರೆ ಎಂದು ಭಂಡಾರಿ ತಿಳಿಸಿದ್ದಾರೆ.

ಉತ್ಪಾದನಾ ಸೂಚ್ಯಂಕ ಏರಿಕೆ: ಇಂಡಿಯಾ ಕಾಂಪೊಸಿಟ್ ಉತ್ಪಾದನಾ ಸೂಚ್ಯಂಕವು 60.9ಕ್ಕೆ ಏರಿಕೆಯಾಗಿದೆ. ಇದು ಮೇ ತಿಂಗಳಲ್ಲಿ 60.5 ದಾಖಲಾಗಿತ್ತು. 

ಹೆಚ್ಚಿನ ಹೊಸ ಬೇಡಿಕೆಗಳ ಒಳಹರಿವಿನಿಂದ ಕಾಂಪೊಸಿಟ್‌ ಪಿಎಂಐ ಜೂನ್‌ನಲ್ಲಿ ಏರಿಕೆಯಾಗಿದೆ. ಸೇವಾ ವಲಯದ ಸಂಸ್ಥೆಗಳಿಗಿಂತ ತಯಾರಿಕಾ ಸಂಸ್ಥೆಗಳು ಸೂಚ್ಯಂಕದ ಏರಿಕೆಗೆ ಕೊಡುಗೆ ನೀಡಿದವು ಎಂದು ಭಂಡಾರಿ ತಿಳಿಸಿದ್ದಾರೆ. 

2005ರ ಡಿಸೆಂಬರ್‌ಗೆ ಹೋಲಿಸಿದರೆ ಈ ತಿಂಗಳಲ್ಲಿ ಖಾಸಗಿ ವಲಯದ ಉದ್ಯೋಗ ನೇಮಕಾತಿಯು ಹೆಚ್ಚಳವಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಸೇವಾ ವಲಯದ 400 ಕಂಪನಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.