ADVERTISEMENT

ಸೇವಾ ವಲಯ: 13 ವರ್ಷದಲ್ಲಿ ಎರಡನೇ ವೇಗದ ಬೆಳವಣಿಗೆ

ಪಿಟಿಐ
Published 5 ಜೂನ್ 2023, 14:29 IST
Last Updated 5 ಜೂನ್ 2023, 14:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ದೇಶದ ಸೇವಾ ವಲಯದ ಚಟುವಟಿಕೆಗಳು ಮೇ ತಿಂಗಳಿನಲ್ಲಿ 13 ವರ್ಷಗಳ ಎರಡನೆಯ ಅತ್ಯಂತ ವೇಗದ ಬೆಳವಣಿಗೆ ಕಂಡಿವೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆಯು ಸೋಮವಾರ ಹೇಳಿದೆ.

ಬೇಡಿಕೆಯು ಹೆಚ್ಚಾಗಿರುವುದು ಹಾಗೂ ಕಂಪನಿಗಳಿಗೆ ಹೊಸ ವಹಿವಾಟುಗಳು ಸಿಕ್ಕಿರುವುದರಿಂದ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ ಎಂದು ಅದು ತಿಳಿಸಿದೆ.

ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳಿನಲ್ಲಿ ವಲಯದ ಚಟುವಟಿಕೆಯು ಅಲ್ಪ ಇಳಿಕೆ ಕಂಡಿದೆ. ಸೇವಾ ವಲಯದ ಚಟುವಟಿಕೆಗಳನ್ನು ತಿಳಿಸುವ ಇಂಡಿಯಾ ಸರ್ವಿಸಸ್‌ ಪಿಎಂಐ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ಏಪ್ರಿಲ್‌ನಲ್ಲಿ 62 ಇದ್ದಿದ್ದು ಮೇ ನಲ್ಲಿ 61.2ಕ್ಕೆ ಇಳಿಕೆ ಆಗಿದೆ. ಹೀಗಿದ್ದರೂ ಇದು 13 ವರ್ಷಗಳ ಎರಡನೆಯ ಅತ್ಯಂತ ವೇಗದ ಬೆಳವಣಿಗೆ.

ADVERTISEMENT

ಜಾಹೀರಾತು, ಬೇಡಿಕೆ ಮತ್ತು ಮಾರುಕಟ್ಟೆಯು ಅನುಕೂಲಕರವಾಗಿ ಇರುವ ಕಾರಣಗಳಿಂದಾಗಿ ಮುಂದಿನ 12 ತಿಂಗಳಲ್ಲಿ ಚಟುವಟಿಕೆಯು ಇನ್ನಷ್ಟು ಏರಿಕೆ ಕಾಣುವ ವಿಶ್ವಾಸವನ್ನು ಕಂಪನಿಗಳು ಹೊಂದಿವೆ ಎಂದು ಸಂಸ್ಥೆ ಹೇಳಿದೆ.

ತಯಾರಿಕಾ ವಲಯ ಮತ್ತು ಸೇವಾ ವಲಯದ ಒಟ್ಟು ಬೆಳವಣಿಗೆಯನ್ನು ತಿಳಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ನಲ್ಲಿ ಏಪ್ರಿಲ್‌ಗೆ ಹೋಲಿಸಿದರೆ ಮೇನಲ್ಲಿ ಯಾವುದೇ ಬದಲಾವಣೆ ಆಗಿಲ್ಲ; 61.6ರಷ್ಟೇ ಇದೆ.

ಆಹಾರ, ಸಾರಿಗೆ ಮತ್ತು ವೇತನಕ್ಕೆ ಸಂಬಂಧಿಸಿದಂತೆ ಮೇ ತಿಂಗಳಿನಲ್ಲಿ ಹೆಚ್ಚು ವೆಚ್ಚ ಮಾಡಬೇಕಾಗಿದೆ. ವೆಚ್ಚ ಹೆಚ್ಚಾಗುತ್ತಿರುವುದರಿಂದ ಖರೀದಿ ಸಾಮರ್ಥ್ಯ ತಗ್ಗುವ ಸಾಧ್ಯತೆ ಇದ್ದು, ಕೈಗೆಟಕುವ ಬೆಲೆಗೆ ಸೇವೆಗಳು ಲಭ್ಯವಾಗದೇ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಆಗಬಹುದು. ಕಂಪನಿಗಳು ತಮ್ಮ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮತ್ತು  ಸವಾಲುಗಳನ್ನು ಎದುರಿಸಲು ಪರ್ಯಾಯ ಮೂಲಗಳ ಹುಡುಕಾಟ ನಡೆಸುತ್ತಿವೆ ಎಂದು ಎಸ್‌ ಆ್ಯಂಡ್‌ ಪಿಒ ಗ್ಲೋಬಲ್‌ ಮಾರ್ಕೆಟ್‌ ಇಂಟಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ.

ಸತತ 22ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಬೆಳವಣಿಗೆ 12 ತಿಂಗಳಲ್ಲಿ ವಹಿವಾಟು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಲ್ಲಿ ಕಂಪನಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.