ಬೆಂಗಳೂರು: ದೇಶದ ಪ್ರಮುಖ ಐ.ಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಇನ್ಫೊಸಿಸ್ ಮತ್ತು ವಿಪ್ರೊದ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
2023–24ರ ಮಾರ್ಚ್‌ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಮೂರು ಕಂಪನಿಗಳ ಒಟ್ಟು ಉದ್ಯೋಗಿಗಳ ಸಂಖ್ಯೆ 64 ಸಾವಿರದಷ್ಟು ಕಡಿಮೆ ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಐ.ಟಿ ಸೇವೆಗಳಿಗೆ ಬೇಡಿಕೆ ಕಡಿಮೆ ಆಗಿರುವುದು, ಗ್ರಾಹಕರು ವೆಚ್ಚದ ನಿಯಂತ್ರಣ ಅನುಸರಿಸುತ್ತಿರುವುದರಿಂದ ಐ.ಟಿ ಕಂಪನಿಯ ಸಿಬ್ಬಂದಿ ಸಂಖ್ಯೆ ಇಳಿಕೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಏಪ್ರಿಲ್ 19ರಂದು ವಿಪ್ರೊ ತನ್ನ ನಾಲ್ಕನೇ ತ್ರೈಮಾಸಿಕದ ವರದಿ ಪ್ರಕಟಿಸಿತ್ತು. ಇದರಲ್ಲಿ ಕಂಪನಿಯ ಸಿಬ್ಬಂದಿ ಸಂಖ್ಯೆಯು ಮಾರ್ಚ್ ತ್ರೈಮಾಸಿಕದಲ್ಲಿ 2.34 ಲಕ್ಷ ಇದೆ ಎಂದು ತಿಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯಲ್ಲಿ 2.58 ಲಕ್ಷ ಉದ್ಯೋಗಿಗಳಿದ್ದರು. ಇದಕ್ಕೆ ಹೋಲಿಸಿದರೆ, 24,516 ಮಂದಿ ಕಡಿಮೆ ಆಗಿದ್ದಾರೆ.
ಇನ್ಫೊಸಿಸ್‌ನಲ್ಲಿ ಉದ್ಯೋಗಿಗಳ ಸಂಖ್ಯೆ 3.43 ಲಕ್ಷದಿಂದ 3.17 ಲಕ್ಷಕ್ಕೆ ಇಳಿದಿದೆ. 25,994 ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದೆ. ಟಿಸಿಎಸ್‌ನ 6 ಲಕ್ಷ ಸಿಬ್ಬಂದಿಯಲ್ಲಿ 13,249 ಮಂದಿ ಕಡಿಮೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.