ADVERTISEMENT

ಮಹಿಳಾ ಪೈಲಟ್‌ಗಳ ಸಂಖ್ಯೆ ಹೆಚ್ಚಳಕ್ಕೆ ಇಂಡಿಗೊ ನಿರ್ಧಾರ

ಪಿಟಿಐ
Published 15 ಆಗಸ್ಟ್ 2024, 13:33 IST
Last Updated 15 ಆಗಸ್ಟ್ 2024, 13:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಸ್ತುತ ಇಂಡಿಗೊ ವಿಮಾನಯಾನ ಕಂಪನಿಯಲ್ಲಿ 800ಕ್ಕೂ ಹೆಚ್ಚು ಮಹಿಳಾ ಪೈಲಟ್‌ಗಳಿದ್ದು, ಮುಂದಿನ ವರ್ಷದ ಆಗಸ್ಟ್‌ನೊಳಗೆ ಈ ಸಂಖ್ಯೆಯನ್ನು ಒಂದು ಸಾವಿರಕ್ಕೇರಿಸಲು ಕಂಪನಿಯು ನಿರ್ಧರಿಸಿದೆ. 

ಕೆಲಸದಲ್ಲಿ ವೈವಿಧ್ಯತೆ‌ಯ ಜೊತೆಗೆ ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ವಿಮಾನಗಳ ಹಾರಾಟ ಮತ್ತು ಸಂಪರ್ಕ ಜಾಲವನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದ ಎಂದು ಇಂಡಿಗೊ ತಿಳಿಸಿದೆ.

‘ಎಂಜಿನಿಯರಿಂಗ್‌ ಹಾಗೂ ವಿಮಾನ ಸಿಬ್ಬಂದಿ ಸೇರಿ ಎಲ್ಲಾ ವಿಭಾಗದಲ್ಲಿನ ಕೆಲಸದ ವಿಸ್ತರಣೆಗೆ ಕ್ರಮವಹಿಸಲಾಗಿದೆ’ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಸಮೂಹ ಮುಖ್ಯಸ್ಥ ಸುಖಜಿತ್ ಎಸ್. ಪಸ್ರಿಚಾ ತಿಳಿಸಿದ್ದಾರೆ.

ADVERTISEMENT

ಜಾಗತಿಕ ಮಟ್ಟದಲ್ಲಿ ಮಹಿಳಾ ಪೈಲಟ್‌ಗಳ ಸರಾಸರಿ ಪ್ರಮಾಣ ಶೇ 7ರಿಂದ ಶೇ 9ರಷ್ಟಿದೆ. ಇದಕ್ಕೆ ಹೋಲಿಸಿದರೆ ಇಂಡಿಗೊದಲ್ಲಿ ಶೇ 14ರಷ್ಟು ಮಹಿಳಾ ಪೈಲಟ್‌ಗಳಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಪ್ರತಿದಿನ ಇಂಡಿಗೊ ಕಂಪನಿಯ 2 ಸಾವಿರಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಪೈಲಟ್‌ಗಳಿದ್ದಾರೆ. 77ನೇ ಸ್ವಾತಂತ್ರ್ಯದ ದಿನಾಚರಣೆ ಅಂಗವಾಗಿ ಬುಧವಾರ ಹೊಸದಾಗಿ 77 ಮಹಿಳಾ ಪೈಲಟ್‌ಗಳು ಕಂಪನಿಗೆ ಸೇರ್ಪಡೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.