ನವದೆಹಲಿ: ದೇಶದ ಕೈಗಾರಿಕಾ ವಲಯದ ಬೆಳವಣಿಗೆ ದರವು ಜೂನ್ ತಿಂಗಳಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾದ ಶೇಕಡ 3.7ಕ್ಕೆ ಕುಸಿದಿದೆ. ತಯಾರಿಕಾ ವಲಯದಲ್ಲಿ ಹೆಚ್ಚಿನ ಬೆಳವಣಿಗೆ ದಾಖಲಾಗದೆ ಇದ್ದುದು ಜೂನ್‌ನಲ್ಲಿ ಕೈಗಾರಿಕಾ ಬೆಳವಣಿಗೆ ದರವು ಕಡಿಮೆ ಆಗುವುದಕ್ಕೆ ಮುಖ್ಯ ಕಾರಣ.
ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು (ಐಐಪಿ) 2022ರ ಜೂನ್‌ನಲ್ಲಿ ಶೇಕಡ 12.6ರಷ್ಟು ಆಗಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಇದು ಶೇ 1.9ರಷ್ಟು ಇದ್ದಿದ್ದು ಏಪ್ರಿಲ್‌ನಲ್ಲಿ ಶೇ 5.3ಕ್ಕೆ ಹೆಚ್ಚಾಗಿತ್ತು. ಮೇ ತಿಂಗಳಲ್ಲಿ ಶೇ 5.3ಕ್ಕೆ ಏರಿಕೆ ಕಂಡಿತ್ತು.
ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಐಐಪಿ ಬೆಳವಣಿಗೆಯು ಶೇ 4.5ರಷ್ಟು ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆಗಿದ್ದ ಶೇ 12.9ರಷ್ಟು ಬೆಳವಣಿಗೆಗೆ ಹೋಲಿಸಿದರೆ ಕಡಿಮೆ.
‘ಹಿಂದಿನ ವರ್ಷದಲ್ಲಿ ಆಗಿದ್ದ ಬೆಳವಣಿಗೆಯನ್ನು ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಸೃಷ್ಟಿಯಾಗಿದ್ದ ಅಸಾಮಾನ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಹಿಸಬೇಕು’ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ಅಧಿಕೃತ ಪ್ರಕಟಣೆ ತಿಳಿಸಿದೆ.
ಜೂನ್ ತಿಂಗಳಲ್ಲಿ ತಯಾರಿಕಾ ವಲಯದ ಬೆಳವಣಿಗೆ ಶೇ 3.1ರಷ್ಟು ಬೆಳವಣಿಗೆ ಸಾಧ್ಯವಾಗಿದೆ. ವಿದ್ಯುತ್ ಉತ್ಪಾದನೆ (ಶೇ 4.2ರಷ್ಟು), ಗಣಿಗಾರಿಕೆ (ಶೇ 7.6ರಷ್ಟು), ಬಂಡವಾಳ ಸರಕು (ಶೇ 2.2ರಷ್ಟು) ವಲಯಗಳಲ್ಲಿ ಬೆಳವಣಿಗೆ ಕಂಡುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.