ನವದೆಹಲಿ: ಕೈಗಾರಿಕಾ ವಲಯದ ಉತ್ಪಾದನೆಗಳ ಬೆಳವಣಿಗೆ ಪ್ರಮಾಣವು ಮಾರ್ಚ್ ತಿಂಗಳಲ್ಲಿ ಮಂದಗತಿಗೆ ತಿರುಗಿದೆ. ಈ ವಲಯದ ಉತ್ಪಾದನೆಯ ಬೆಳವಣಿಗೆ ಶೇ 1.9ರಷ್ಟು ಆಗಿದೆ. ಹಿಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಪ್ರಮಾಣವು ಶೇ 24.2ರಷ್ಟು ಇತ್ತು.
ತಯಾರಿಕಾ ವಲಯದ ಸಾಧನೆಯು ದೊಡ್ಡ ಮಟ್ಟದಲ್ಲಿ ಇಲ್ಲದಿದ್ದುದು ಈ ಮಂದಗತಿಗೆ ಕಾರಣ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ಜನವರಿ ಮತ್ತ ಫೆಬ್ರುವರಿಯಲ್ಲಿ ಶೇ 1.5ರಷ್ಟು ಇತ್ತು. ಆ ಸಂದರ್ಭದಲ್ಲಿ ದೇಶದಲ್ಲಿ ಕೋವಿಡ್‌ನ ಮೂರನೆಯ ಅಲೆ ಇತ್ತು.
ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ನೀಡಿರುವ ಅಂಕಿ–ಅಂಶಗಳ ಪ್ರಕಾರ, ಮಾರ್ಚ್ ತಿಂಗಳಲ್ಲಿ ಗಣಿಗಾರಿಕೆ ವಲಯದಲ್ಲಿ ಆಗಿರುವ ಬೆಳವಣಿಗೆ ಪ್ರಮಾಣ ಶೇ 4ರಷ್ಟು. ಇದು ಹಿಂದಿನ ವರ್ಷದ ಮಾರ್ಚ್‌ನಲ್ಲಿ ಶೇ 6.1ರಷ್ಟು ಆಗಿತ್ತು.
ತಯಾರಿಕಾ ವಲಯವು ಮಾರ್ಚ್ ತಿಂಗಳಲ್ಲಿ ಕೇವಲ ಶೇ 0.9ರಷ್ಟು ಬೆಳವಣಿಗೆ ಸಾಧಿಸಿದೆ. ಹಿಂದಿನ ವರ್ಷದಲ್ಲಿ ಈ ವಲಯವು ಶೇ 28.4ರಷ್ಟು ಬೆಳವಣಿಗೆ ಕಂಡಿತ್ತು.
2021–22ನೆಯ ಹಣಕಾಸು ವರ್ಷದಲ್ಲಿ ಕೈಗಾರಿಕಾ ವಲಯದ ಉತ್ಪಾದನೆಯು ಶೇ 11.3ರಷ್ಟು ಆಗಿದೆ. 2020-21ರಲ್ಲಿ ಕೈಗಾರಿಕಾ ವಲಯದ ಬೆಳವಣಿಗೆಯು ಶೇ 8.4ರಷ್ಟು ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.