ADVERTISEMENT

ಹೊಸದಾಗಿ ಕೆಲಸಕ್ಕೆ ಸೇರಿದ 6 ತಿಂಗಳಲ್ಲಿ ಉದ್ಯೋಗ ತೊರೆಯುವವರ ಸಂಖ್ಯೆ ಹೆಚ್ಚು

ಕೆಲಸ ತೊರೆಯುವ 22–23 ವಯೋಮಾನದವರ ಸಂಖ್ಯೆ ಹೆಚ್ಚು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 0:01 IST
Last Updated 2 ಸೆಪ್ಟೆಂಬರ್ 2024, 0:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಖಾಸಗಿ ಕಂಪನಿಗಳಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಆರು ತಿಂಗಳೊಳಗೆ ಉದ್ಯೋಗ ತೊರೆಯುವವರ ಸಂಖ್ಯೆಯು ವಾರ್ಷಿಕ ಶೇ 4ರಿಂದ ಶೇ 5ರಷ್ಟು ಏರಿಕೆಯಾಗಿದೆ ಎಂದು ಉದ್ಯೋಗ ಮತ್ತು ಮಾನವ ಸಂಪನ್ಮೂಲ ಸೇವೆ ಒದಗಿಸುವ ಟೀಮ್‌ಲೀಸ್‌ ಸರ್ವಿಸಸ್‌ ಕಂಪನಿ ತಿಳಿಸಿದೆ.

ಕೆಲಸಕ್ಕೆ ಸೇರಿದ ತಕ್ಷಣ ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಹೊಸಬರು ಪರದಾಡುತ್ತಾರೆ. ಉದ್ಯೋಗ ಸ್ಥಳದಲ್ಲಿ ಹೊಂದಿಕೊಳ್ಳಲು ಸೋಲುತ್ತಾರೆ. ಇದರಿಂದ ಕೆಲಸದ ಬಗ್ಗೆ ಅತೃಪ್ತಿ ತಳೆಯುತ್ತಾರೆ. ಕೆಲಸ ತೊರೆಯುವವರಲ್ಲಿ 22ರಿಂದ 23 ವಯೋಮಾನದವರು ಹೆಚ್ಚಿದ್ದಾರೆ ಎಂದು ಕಂಪನಿಯ ಕಾರ್ಯತಂತ್ರ ವಿಭಾಗದ ಮುಖ್ಯ ಅಧಿಕಾರಿ ಸುಬ್ಬುರತಿನಂ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಎಲೆಕ್ಟ್ರಾನಿಕ್ ಉಪಕರಣ ತಯಾರಿಕೆ, ಮಾಹಿತಿ ತಂತ್ರಜ್ಞಾನ, ಬ್ಯಾಕಿಂಗ್‌, ಹಣಕಾಸು ಸೇವೆ ಮತ್ತು ವಿಮಾ ವಲಯ, ಟೆಲಿಕಾಂ, ರಿಟೇಲ್‌ ಹಾಗೂ ತಯಾರಿಕಾ ವಲಯ ಸೇರಿ ಇತರೆ ವಲಯಗಳಲ್ಲಿ ಈ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ದಕ್ಷಿಣ ಭಾರತದಲ್ಲಿ ಉದ್ಯೋಗ ತೊರೆಯುವವರ ಸಂಖ್ಯೆ ಶೇ 51ರಷ್ಟಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲಿ ಈ ಪ್ರಮಾಣ ಹೆಚ್ಚಿದೆ ಎಂದು ವಿವರಿಸಿದ್ದಾರೆ.

ಉದ್ಯೋಗ ತೊರೆಯುವ ಪುರುಷರ ಸಂಖ್ಯೆ ಶೇ 84.5ರಷ್ಟಿದ್ದರೆ, ಮಹಿಳೆಯರ ಸಂಖ್ಯೆ ಶೇ 15.5ರಷ್ಟಿದೆ. ‌ 

ಈ ಬೆಳವಣಿಗೆಯು ಕಂಪನಿಗಳ ಹಣಕಾಸು ಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ. ವಾರ್ಷಿಕವಾಗಿ ಉದ್ಯೋಗ ತೊರೆಯುವವರ ಸಂಖ್ಯೆ ಶೇ 10ರಿಂದ 15ರಷ್ಟಿದೆ. ಇದಕ್ಕೂ ಈ ಬೆಳವಣಿಗೆಯು ಗಣನೀಯ ಪಾಲು ನೀಡುತ್ತಿದೆ ಎಂದು ತಿಳಿಸಿದ್ದಾರೆ. 

ಯುವ ಉದ್ಯೋಗಿಗಳು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಹಾಗಾಗಿ, ಅವರ ಹೊಸ ಅವಕಾಶ ಹುಡುಕುತ್ತಾ ಕಂಪನಿ ತೊರೆದು ಹೋಗುವುದು ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

2000ರಲ್ಲಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಇಂತಹ ಬೆಳವಣಿಗೆ ಕಂಡುಬಂದಿತ್ತು. ಆ ವೇಳೆ ಈ ವಲಯವು ಕ್ಷಿಪ್ರಗತಿಯಲ್ಲಿ ಪ್ರಗತಿ ಕಾಣುತ್ತಿತ್ತು. ಕೌಶಲ ಹೊಂದಿದ ವೃತ್ತಿಪರರಿಗೆ ಬೇಡಿಕೆ ಹೆಚ್ಚಿತ್ತು. ಹಾಗಾಗಿ, ಕಂಪನಿಗಳು ಹೊಸಬರನ್ನು ಕೆಲಸದಲ್ಲಿ ಉಳಿಸಿಕೊಳ್ಳಲು ಹರಸಾಹಸಪಟ್ಟಿದ್ದವು ಎಂದು ಹೇಳಿದ್ದಾರೆ.

ಕೆಲಸಕ್ಕೆ ಸೇರಿದ ಆರು ತಿಂಗಳಿನಲ್ಲಿ ಅಥವಾ ಪ್ರೊಬೆಷನರಿ ಅವಧಿಯಲ್ಲಿ ಉದ್ಯೋಗ ತೊರೆಯುತ್ತಾರೆ. ಕೆಲವು ಕಂಪನಿಗಳಲ್ಲಿ ಮೂರು ತಿಂಗಳಿಗೆ ಕೆಲಸ ತೊರೆಯುವವರ ಸಂಖ್ಯೆ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.