ADVERTISEMENT

ಚಿಲ್ಲರೆ ಹಣದುಬ್ಬರ: 5 ವರ್ಷದ ಕನಿಷ್ಠ ಮಟ್ಟಕ್ಕೆ

ಆಹಾರ ಪದಾರ್ಥಗಳ ಬೆಲೆಯಿಂದ ಇಳಿಕೆ । ಆರ್‌ಬಿಐನ ಮಿತಿಗಿಂತಲೂ ಕಡಿಮೆ

ಪಿಟಿಐ
Published 12 ಆಗಸ್ಟ್ 2024, 15:24 IST
Last Updated 12 ಆಗಸ್ಟ್ 2024, 15:24 IST
Inflation
Inflation   

ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಇಳಿಕೆಯಿಂದ ದೇಶದ ಚಿಲ್ಲರೆ ಹಣದುಬ್ಬರವು ಜುಲೈ ತಿಂಗಳಲ್ಲಿ ಶೇ 3.54ಕ್ಕೆ ಇಳಿಕೆಯಾಗಿದೆ. ಇದು 5 ವರ್ಷದ ಕನಿಷ್ಠ ಮಟ್ಟವಾಗಿದೆ. 

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರ ದರವು ಜೂನ್‌ನಲ್ಲಿ ಶೇ 5.08ರಷ್ಟು ದಾಖಲಾಗಿತ್ತು. 2023ರ ಜುಲೈನಲ್ಲಿ ಶೇ 7.44ರಷ್ಟಿತ್ತು. ಚಿಲ್ಲರೆ ಹಣದುಬ್ಬರವು 2019ರ ಸೆಪ್ಟೆಂಬರ್ ನಂತರ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್‌ನ ಗುರಿಯಾದ ಶೇ 4ಕ್ಕಿಂತ ಕಡಿಮೆಯಾಗಿದೆ.

ಜೂನ್‌ನಲ್ಲಿ ಆಹಾರ ಪದಾರ್ಥಗಳ ಹಣದುಬ್ಬರವು ಶೇ 9.36ರಷ್ಟಿತ್ತು. ಇದು ಜುಲೈನಲ್ಲಿ ಶೇ 5.42ಕ್ಕೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 11.51ರಷ್ಟಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ವರದಿ ಸೋಮವಾರ ತಿಳಿಸಿದೆ. 2019ರ ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 3.99ರಷ್ಟು ದಾಖಲಾಗಿತ್ತು.

ADVERTISEMENT

ಹಾಲು ಮತ್ತು ಹಾಲಿನ ಉತ್ಪನ್ನಗಳ ವಾರ್ಷಿಕ ಹಣದುಬ್ಬರವು ಶೇ 2.99, ಎಣ್ಣೆ ಮತ್ತು ಕೊಬ್ಬು (–) ಶೇ 1.17, ಹಣ್ಣುಗಳು ಶೇ 3.84 ಮತ್ತು ಮಸಾಲೆ ಪದಾರ್ಥಗಳು (–) ಶೇ 1.43ರಷ್ಟು ದಾಖಲಾಗಿವೆ. ತರಕಾರಿಗಳ ಹಣದುಬ್ಬರವು ಶೇ 6.83 ಮತ್ತು ಸಿರಿಧಾನ್ಯಗಳು ಮತ್ತು ಉತ್ಪನ್ನಗಳು ಶೇ 8.14ರಷ್ಟು ದಾಖಲಿಸಿವೆ. 

ಹಣದುಬ್ಬರವು ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಶೇ 4.1ರಷ್ಟು ಹೆಚ್ಚಿದ್ದರೆ, ನಗರ ಪ್ರದೇಶಗಳಲ್ಲಿ ಶೇ 2.98ರಷ್ಟಿದೆ. ರಾಜ್ಯಗಳ ಪೈಕಿ ಬಿಹಾರದಲ್ಲಿ ಅತಿ ಹೆಚ್ಚು ಹಣದುಬ್ಬರವಿದ್ದು ಶೇ 5.87ರಷ್ಟು ದಾಖಲಾಗಿದೆ. ಜಾರ್ಖಂಡ್‌ನಲ್ಲಿ ಅತಿ ಕಡಿಮೆ ಶೇ 1.72ರಷ್ಟು ಇದೆ.

‘ಜುಲೈನಲ್ಲಿ ಸಿಪಿಐ ಹಣದುಬ್ಬರವು 59 ತಿಂಗಳ ಕನಿಷ್ಠಕ್ಕೆ ಇಳಿದಿದೆ. ಇದು ಐಸಿಆರ್‌ಎ ಅಂದಾಜಿಗಿಂತ ಸ್ವಲ್ಪ ಕಡಿಮೆ’ ಎಂದು ಐಸಿಆರ್‌ಎನ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ನಿರೀಕ್ಷೆಯಂತೆ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಹೆಚ್ಚು ಮಳೆಯಾಗಲಿದೆ. ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹದ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಇದು ಬೆಳೆಯ ಮೇಲೆ ಪರಿಣಾಮ ಬೀರಲಿದೆ ಎಂದು ನಾಯರ್ ಹೇಳಿದ್ದಾರೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಇಳಿಕೆ:

ದೇಶದ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಜೂನ್‌ ತಿಂಗಳಲ್ಲಿ ಶೇ 4.2ರಷ್ಟಾಗಿದ್ದು, 5 ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ. 

ತಯಾರಿಕಾ ವಲಯವು ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ. ಇದರಿಂದ ಸೂಚ್ಯಂಕ ಇಳಿಕೆಯಾಗಿದೆ. ಆದರೆ, ವಿದ್ಯುತ್‌ ಮತ್ತು ಗಣಿಗಾರಿಕೆ ವಲಯವು ಉತ್ತಮವಾಗಿ ಕಾರ್ಯನಿರ್ವಹಿಸಿವೆ.

ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಈ ಬೆಳವಣಿಗೆಯು ಮೇ ತಿಂಗಳಲ್ಲಿ ಶೇ 6.2ರಷ್ಟು ದಾಖಲಾಗಿತ್ತು. ಏಪ್ರಿಲ್‌ನಲ್ಲಿ ಶೇ 5, ಮಾರ್ಚ್‌ನಲ್ಲಿ ಶೇ 5.5, ಫೆಬ್ರುವರಿಯಲ್ಲಿ ಶೇ 5.6 ಮತ್ತು ಜನವರಿಯಲ್ಲಿ ಶೇ 4.2ರಷ್ಟು ಆಗಿತ್ತು. 

ಈ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಐಐಪಿ ಬೆಳವಣಿಗೆ ಶೇ 5.2ರಷ್ಟು ದಾಖಲಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 4.7ರಷ್ಟಿತ್ತು. 2023ರ ಜೂನ್‌ನಲ್ಲಿ ಶೇ 4 ಆಗಿತ್ತು ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಂಕಿ–ಅಂಶಗಳು ತಿಳಿಸಿವೆ.

ತಯಾರಿಕಾ ವಲಯದ ಬೆಳವಣಿಗೆ ಹಿಂದಿನ ವರ್ಷದ ಜೂನ್‌ನಲ್ಲಿ ಶೇ 3.5ರಷ್ಟಿತ್ತು. ಅದು ಈ ಬಾರಿ ಶೇ 2.6ಕ್ಕೆ ಇಳಿದಿದೆ. ಗಣಿಗಾರಿಕೆ ವಲಯವು ಶೇ 10.3 ಮತ್ತು ವಿದ್ಯುತ್‌ ವಲಯವು ಶೇ 8.6ರಷ್ಟು ಪ್ರಗತಿ ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕ್ರಮವಾಗಿ ಶೇ 7.6 ಮತ್ತು ಶೇ 4.2ರಷ್ಟಿತ್ತು. 

ಮೂಲಸೌಕರ್ಯ/ನಿರ್ಮಾಣ ಸರಕುಗಳ ಬೆಳವಣಿಗೆ ಶೇ 4.4 ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 13.3ರಷ್ಟಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.