ನವದೆಹಲಿ: ಅರ್ಥ ವ್ಯವಸ್ಥೆಯು ಸುಧಾರಿಸುತ್ತಿರುವ ಇನ್ನಷ್ಟು ಸೂಚನೆಗಳು ಕಂಡುಬಂದಿದ್ದು, ಚಿಲ್ಲರೆ ಹಣದುಬ್ಬರ ಪ್ರಮಾಣವು ಜನವರಿಯಲ್ಲಿ ತಗ್ಗಿದೆ. ಕೈಗಾರಿಕಾ ಉತ್ಪಾದನೆಯು ಹೆಚ್ಚಳ ಕಂಡಿದೆ. ಇದರಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಬಡ್ಡಿ ದರಗಳಲ್ಲಿ ಇನ್ನಷ್ಟು ಕಡಿತ ಮಾಡಲು ಅವಕಾಶ ಸಿಕ್ಕಂತಾಗಿದೆ.
ಗ್ರಾಹಕ ಬೆಲೆ ಹಣದುಬ್ಬರ ಪ್ರಮಾಣವು ಜನವರಿಯಲ್ಲಿ ಹದಿನಾರು ತಿಂಗಳುಗಳ ಕನಿಷ್ಠ ಮಟ್ಟವಾದ ಶೇಕಡ 4.06ಕ್ಕೆ ತಗ್ಗಿದೆ ಎಂದು ಸರ್ಕಾರದ ಅಂಕಿ–ಅಂಶಗಳು ಹೇಳಿವೆ. ಡಿಸೆಂಬರ್‌ನಲ್ಲಿ ಇದು ಶೇ 4.59ರಷ್ಟು ಇತ್ತು. ತರಕಾರಿ ಬೆಲೆಯು ತಗ್ಗುತ್ತಿರುವುದು ಹಣದುಬ್ಬರ ಪ್ರಮಾಣದಲ್ಲಿನ ಇಳಿಕೆಗೆ ಕೊಡುಗೆ ನೀಡಿದೆ.
ತರಕಾರಿಗಳ ಬೆಲೆಯಲ್ಲಿ ಶೇ 16ರಷ್ಟು ಇಳಿಕೆ ಕಂಡುಬಂದಿದೆ. ಆಹಾರ ಮತ್ತು ಪಾನೀಯಗಳ ಹಣದುಬ್ಬರ ಪ್ರಮಾಣವು ಶೇ 2.67ಕ್ಕೆ ಇಳಿದಿದೆ. ಇದು ಡಿಸೆಂಬರ್‌ನಲ್ಲಿ ಶೇ 3.87ರಷ್ಟು ಇತ್ತು.
‘ಹಣದುಬ್ಬರ ಪ್ರಮಾಣ ತಗ್ಗಿರುವ ಕಾರಣ ರೆಪೊ ದರ ಕಡಿತ ಆಗುವ ನಿರೀಕ್ಷೆ ಮತ್ತೆ ಗರಿಗೆದರುವಂತೆ ಆಗಿದೆ. ಆದರೆ, ಆಹಾರೇತರ ವಸ್ತುಗಳ ಹಣದುಬ್ಬರ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿಯೇ ಇರುವ ಕಾರಣ, ಅದರ ಮೇಲೆ ಆರ್‌ಬಿಐ ಹದ್ದಿನ ಕಣ್ಣು ಇರಿಸಲಿದೆ’ ಎಂದು ಅರ್ಥಶಾಸ್ತ್ರಜ್ಞ ಕುನಾಲ್ ಕುಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಫೆಬ್ರುವರಿ, ಮಾರ್ಚ್ ತಿಂಗಳುಗಳಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಳ ಆಗುವ ನಿರೀಕ್ಷೆ ಇದೆ. ಹಾಗಾಗಿ, ಆರ್‌ಬಿಐಗೆ ತಕ್ಷಣಕ್ಕೆ ಬಡ್ಡಿ ದರ ಇಳಿಸಲು ಅವಕಾಶ ದೊರೆತಿದೆ ಎಂದು ಭಾವಿಸಲಾಗದು. ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ತಗ್ಗಿಸಿ, ಹಣದುಬ್ಬರ ಪ್ರಮಾಣದಲ್ಲಿನ ಹೆಚ್ಚಳಕ್ಕೆ ಕಡಿವಾಣ ಹಾಕದಿದ್ದರೆ ರೆಪೊ ದರ ಕಡಿತ ಆಗಲಾರದು’ ಎಂದು ಐಸಿಆರ್‌ಎ ಸಂಸ್ಥೆ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದರು.
ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ಡಿಸೆಂಬರ್‌ನಲ್ಲಿ ಶೇ 1ರಷ್ಟು ಏರಿಕೆ ಕಂಡಿದೆ. ನವೆಂಬರ್ ತಿಂಗಳಲ್ಲಿ ಇದು ಶೇ 2.1ರಷ್ಟು ಕುಸಿತ ದಾಖಲಿಸಿತ್ತು. ತಯಾರಿಕೆ ಮತ್ತು ವಿದ್ಯುತ್ ಉತ್ಪಾದನೆ ವಲಯಗಳಲ್ಲಿ ಬೆಳವಣಿಗೆ ಕಂಡುಬಂದಿದೆ. ಗಣಿಗಾರಿಕೆ ವಲಯದಲ್ಲಿ ಕುಸಿತ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.