ADVERTISEMENT

ರೆಪೊ ದರ ಕಡಿತ ಅನುಮಾನ: ಕ್ರಮಿಸುವ ಹಾದಿ ಇನ್ನೂ ದೂರ ಇದೆ ಎಂದ RBI ಗವರ್ನರ್‌

ಪಿಟಿಐ
Published 13 ಸೆಪ್ಟೆಂಬರ್ 2024, 15:52 IST
Last Updated 13 ಸೆಪ್ಟೆಂಬರ್ 2024, 15:52 IST
ಶಕ್ತಿಕಾಂತ ದಾಸ್‌ –ಪಿಟಿಐ ಚಿತ್ರ
ಶಕ್ತಿಕಾಂತ ದಾಸ್‌ –ಪಿಟಿಐ ಚಿತ್ರ   

ಸಿಂಗಪುರ: ‘ಚಿಲ್ಲರೆ ಹಣದುಬ್ಬರವು ಸತತ ಎರಡನೇ ತಿಂಗಳು ಇಳಿಕೆಯಾಗಿದ್ದರೂ ನಾವು ಕ್ರಮಿಸುವ ಹಾದಿ ಇನ್ನೂ ದೂರವಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಆ ಮೂಲಕ ಮುಂದಿನ ತಿಂಗಳು 7ರಿಂದ 9ರ ವರೆಗೆ ನಡೆಯಲಿರುವ ಆರ್‌ಬಿಐ  ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರ ಕಡಿತಗೊಳಿಸುವ ಸಾಧ್ಯತೆ ಕಡಿಮೆ ಎಂಬ ಬಗ್ಗೆ ಸುಳಿವು ನೀಡಿದ್ದಾರೆ.

ಜುಲೈ ಮತ್ತು ಆಗಸ್ಟ್‌ನಲ್ಲಿ ಹಣದುಬ್ಬರವು ಆರ್‌ಬಿಐ ನಿಗದಿಪಡಿಸಿರುವ ಶೇ 4ರ ಮಿತಿಯೊಳಗೆ ದಾಖಲಾಗಿದೆ. ಹಾಗಾಗಿ, ಆರ್‌ಬಿಐ ರೆಪೊ ದರ ಕಡಿತಗೊಳಿಸಲಿದೆ ಎಂಬ ಆಸೆ ಗೃಹ ಹಾಗೂ ವಾಹನ ಸಾಲಗಾರರಲ್ಲಿ ಚಿಗುರೊಡೆದಿತ್ತು.

ADVERTISEMENT

ಬ್ರೆಟ್ಟನ್‌ ವಡ್ಸ್‌ ಸಮಿತಿಯಿಂದ ಶುಕ್ರವಾರ ‘ಹಣಕಾಸು ವೇದಿಕೆಯ ಭವಿಷ್ಯ’ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ದಾಸ್‌ ಅವರು, ‘2022ರ ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 7.8ರಷ್ಟು ಗರಿಷ್ಠ ಮಟ್ಟಕ್ಕೆ ದಾಖಲಾಗಿತ್ತು. ಸದ್ಯ ನಿಗದಿಪಡಿಸಿದ ಗುರಿಯೊಳಗೆ ದಾಖಲಾಗಿದೆ. ಆದರೆ, ನಾವು ಸಾಗುವ ಹಾದಿ ದೂರವಿರುವುದರಿಂದ ಬೇರೆ ಮಾರ್ಗದತ್ತ ನೋಡಲು ಶಕ್ತವಾಗಿಲ್ಲ’ ಎಂದರು.

‘ಜಾಗತಿಕ ಆರ್ಥಿಕ ಚಟುವಟಿಕೆಗಳು ಮತ್ತು ವ್ಯಾಪಾರ ಇಳಿಮುಖವಾಗಿದೆ. ಹಣದುಬ್ಬರದ ಕೊನೆಯ ಮೈಲಿಯು ಸಾಕಷ್ಟು ಸವಾಲುಗಳು ಒಡ್ಡಿದೆ. ಇದರಿಂದ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಕಷ್ಟಕರವಾಗಿದೆ’ ಎಂದು ಹೇಳಿದರು.

ಹಣದುಬ್ಬರವನ್ನು ಸ್ಥಿರವಾಗಿ ನಿಯಂತ್ರಿಸಬೇಕು. ಹಾಗಾಗಿ, ಅದಕ್ಕೂ ಮೊದಲೇ ಹಣಕಾಸು ನೀತಿಯನ್ನು ಸಡಿಲಗೊಳಿಸುವಿಕೆಗೆ ಜಾಗತಿಕ ಮಟ್ಟದಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಹಿಂದಡಿ ಇಟ್ಟಿವೆ ಎಂದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ ಕಳೆದ 18 ತಿಂಗಳಿನಿಂದಲೂ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.