ನವದೆಹಲಿ: ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಬಂಡವಾಳ ಹೂಡಿಕೆಯು 2021ಕ್ಕೆ ಹೋಲಿಸಿದರೆ 2022ರಲ್ಲಿ ಶೇ 90ರಷ್ಟು ಕುಸಿತ ಕಂಡಿದೆ.
2021ರಲ್ಲಿ ಹೂಡಿಕೆಯು ₹4,814 ಕೋಟಿಯಷ್ಟು ಆಗಿತ್ತು. ಇದು 2022ರಲ್ಲಿ ₹459 ಕೋಟಿಗೆ ಇಳಿಕೆ ಕಂಡಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.
ಚಿನ್ನದ ದರ ಏರಿಕೆ ಆಗಿರುವುದು ಹಾಗೂ ಹಣದುಬ್ಬರದ ಒತ್ತಡದಿಂದಾಗಿ ಹಲವು ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಳ ಮಾಡಿರುವ ಕಾರಣಗಳಿಂದಾಗಿ ಒಳಹರಿವು ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂದು ಅದು ಹೇಳಿದೆ.
ಚಿನ್ನದ ದರ ಹೆಚ್ಚಳವು ಹೂಡಿಕೆದಾರರ ಮೇಲೆ ಒಂದಿಷ್ಟು ಒತ್ತಡ ಉಂಟುಮಾಡಿದೆ. ಬಹಳಷ್ಟು ಮಂದಿ ಹೂಡಿಕೆದಾರರು ಚಿನ್ನದ ದರ ಕಡಿಮೆ ಆಗುವುದಕ್ಕೆ ಕಾಯಲು ಮುಂದಾಗಿದ್ದು, ಹೂಡಿಕೆಯಿಂದ ಹಿಂದೆ ಸರಿದಿದ್ದಾರೆ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ಹಿರಿಯ ವಿಶ್ಲೇಷಕಿ ಕವಿತಾ ಕೃಷ್ಣನ್ ಹೇಳಿದ್ದಾರೆ.
ದೇಶಿ ಮಟ್ಟದಲ್ಲಿ, ಹೂಡಿಕೆದಾರರು 2022ರಲ್ಲಿ ಷೇರುಗಳ ಖರೀದಿ ಮೇಲೆ ಹೆಚ್ಚಿನ ಬಂಡವಾಳ ತೊಡಗಿಸಿದ್ದಾರೆ. ₹1.6 ಲಕ್ಷ ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ. 2021ರಲ್ಲಿ ಷೇರುಗಳ ಮೇಲಿನ ಹೂಡಿಕೆಯು ₹96,700 ಕೋಟಿಯಷ್ಟು ಇತ್ತು. ವ್ಯವಸ್ಥಿತ ಹೂಡಿಕೆಯ ಯೋಜನೆಗಳ (ಎಸ್‌ಐಪಿ) ಮೇಲೆಯೂ ಹೂಡಿಕೆ ಹೆಚ್ಚಾಗುತ್ತಿದೆ.
ರಷ್ಯಾ–ಉಕ್ರೇನ್ ಸಮರದ ಸುತ್ತಲಿನ ಅನಿಶ್ಚಿತತೆ ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್‌ನ ಬಿಗಿಯಾದ ಹಣಕಾಸು ನಿಲುವು ಸೇರಿದಂತೆ ಇನ್ನೂ ಹಲವು ಅಂಶಗಳು ದಾಖಲೆ ಪ್ರಮಾಣದಲ್ಲಿ ಬಂಡವಾಳ ಹೊರಹರಿವಿಗೆ ಕಾರಣವಾಗಿವೆ ಎಂದು ಕೃಷ್ಣನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.