ADVERTISEMENT

ಸೆಬಿ ನಿಯಮಾವಳಿಗಳ ಉಲ್ಲಂಘನೆ ಆರೋಪ; ಇನ್ಫೊಸಿಸ್‌ಗೆ ₹25 ಲಕ್ಷ ದಂಡ

ಪಿಟಿಐ
Published 27 ಜೂನ್ 2024, 16:42 IST
Last Updated 27 ಜೂನ್ 2024, 16:42 IST
,,,,,,
,,,,,,   

‌ನವದೆಹಲಿ: ಇನ್ಫೊಸಿಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸಲೀಲ್ ಪರೇಖ್ ವಿರುದ್ಧ ಆಂತರಿಕ ವ್ಯಾಪಾರ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಇನ್ಪೊಸಿಸ್‌ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ₹25 ಲಕ್ಷ ದಂಡ ವಿಧಿಸಿದೆ.

ಆಂತರಿಕ ವ್ಯಾಪಾರಕ್ಕೆ (ಇನ್‌ಸೈಡರ್‌ ಟ್ರೇಡಿಂಗ್‌) ಸಂಬಂಧಿಸಿದಂತೆ ಸಮರ್ಪಕ ಹಾಗೂ ಪರಿಣಾಮಕಾರಿ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆದರೆ, ಇದರ ಪರಿಪಾಲನೆಯಲ್ಲಿ ಪರೇಖ್‌ ವಿಫಲರಾಗಿದ್ದಾರೆ ಎಂದು ಸೆಬಿ ಆದೇಶದಲ್ಲಿ ತಿಳಿಸಿದೆ.

ಏನಿದು ಪ್ರಕರಣ?

ADVERTISEMENT

2020ರ ಜುಲೈನಲ್ಲಿ ಅಮೆರಿಕ ಮೂಲದ ಸ್ವತ್ತು ನಿರ್ವಹಣಾ ಸಂಸ್ಥೆಯಾದ ವ್ಯಾನ್‌ಗಾರ್ಡ್‌ ಜೊತೆಗೆ ಇನ್ಫೊಸಿಸ್‌ ಒ‍ಪ್ಪಂದ ಮಾಡಿಕೊಂಡಿತ್ತು. ಕ್ಲೌಡ್ ಆಧಾರಿತ ದಾಖಲೆ ಸಂಗ್ರಹಕ್ಕೆ ವೇದಿಕೆ ಕಲ್ಪಿಸುವ ಒಪ್ಪಂದ ಇದಾಗಿದೆ.

ಸೆಬಿ ನಿಯಮಾವಳಿಗಳ ಅನ್ವಯ ಯಾವುದೇ ಕಂಪನಿಗಳು ಒ‍ಪ್ಪಂದ ಅಂತಿಮಗೊಳ್ಳುವುದಕ್ಕೆ ಮೊದಲೇ ಮಾಹಿತಿ ಪ್ರಕಟಿಸುವಂತಿಲ್ಲ. ಇದು ಷೇರುಪೇಟೆಯ ವಹಿವಾಟಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದನ್ನು ಅಪ್ರಕಟಿತ ಬೆಲೆ ಸೂಕ್ಷ್ಮ ಮಾಹಿತಿ (ಯುಪಿಎಸ್ಐ) ಎಂದು ಕರೆಯಲಾಗುತ್ತದೆ.

ಕೆಲವರು ಷೇರುಪೇಟೆಯಲ್ಲಿ ಲಾಭ ಪಡೆಯಲು ಈ ಅಕ್ರಮ ಆಂತರಿಕ ವ್ಯಾಪಾರಕ್ಕೆ ಮುಂದಾಗುವುದು ಉಂಟು. ಹಾಗಾಗಿ, ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅವರೇ ಇದಕ್ಕೆ ಅಧಿಕೃತ ಹೊಣೆಗಾರರಾಗಿರುತ್ತಾರೆ. ಆದರೆ, ಎರಡೂ ಕಂಪನಿಗಳ ನಡುವಿನ ಒಪ್ಪಂದ ಕುರಿತ ಮಾಹಿತಿಯು ಸೋರಿಕೆಯಾಗಿತ್ತು ಎಂದು ಹೇಳಲಾಗಿದೆ.

ಈ ಬಗ್ಗೆ ಸೆಬಿಯು ತನಿಖೆ ನಡೆಸಿತ್ತು. ಅಪ್ರಕಟಿತ ಬೆಲೆ ಸೂಕ್ಷ್ಮ ಮಾಹಿತಿ ಕಾಪಾಡಿಕೊಳ್ಳುವಲ್ಲಿ ಇನ್ಫೊಸಿಸ್‌ ನಿಯಮಾವಳಿ ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಿತ್ತು. ಷೇರುಗಳ ಕೃತಕ ಏರಿಕೆ ಅಥವಾ ಇಳಿಕೆ ತಡೆಯಲು ಸೆಬಿಯು ಈ ನಿಯಮಾವಳಿಗಳನ್ನು ರೂಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.