ನವದೆಹಲಿ: ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಗೆ ₹240 ಕೋಟಿ ಮೌಲ್ಯದ ಕಂಪನಿ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ಕೋಟ್ಯಧಿಪತಿಗಳ ಸಾಲಿಗೆ ಈ ಮಗು ಸೇರಿದೆ.
ಷೇರು ಪೇಟೆಯ ಮಾಹಿತಿ ಅನ್ವಯ ಇನ್ಫೊಸಿಸ್‌ನ 15 ಲಕ್ಷ ಷೇರುಗಳು ಅಂದರೆ ಕಂಪನಿಯ ಶೇ 0.04ರಷ್ಟು ಮೌಲ್ಯದ ಷೇರುಗಳನ್ನು ಮೊಮ್ಮಗನಿಗೆ ನೀಡಿದ್ದಾರೆ. ಈ ವರ್ಗಾವಣೆಯು ಷೇರುಪೇಟೆ ಅವಧಿಯ ಹೊರಗೆ ನಡೆದಿದ್ದು, ಫೈಲಿಂಗ್ ಸಂದರ್ಭದಲ್ಲಿ ಬಹಿರಂಗಗೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದರಿಂದಾಗಿ ಇನ್ಫೊಸಿಸ್‌ನಲ್ಲಿದ್ದ ನಾರಾಯಣಮೂರ್ತಿ ಅವರ ಷೇರು ಶೇ 0.40ಯಿಂದ ಶೇ 0.36ಕ್ಕೆ ಕುಸಿದಿದ್ದು, ಅವರ ಬಳಿ ಸದ್ಯ 1.51 ಕೋಟಿ ಷೇರುಗಳು ಉಳಿದಿವೆ.
ನಾರಾಯಣಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಹಾಗೂ ಅಪರ್ಣಾ ಕೃಷ್ಣನ್ ದಂಪತಿಗೆ 2023ರ ನವೆಂಬರ್‌ನಲ್ಲಿ ಪುತ್ರ ಏಕಾಗ್ರ ಜನಿಸಿದರು. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರಿಗೆ ಏಕಾಗ್ರ ಮೂರನೇ ಮೊಮ್ಮಗು. ಅಕ್ಷತಾ ಮೂರ್ತಿ ಹಾಗೂ ರಿಷಿ ಸುನಕ್ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ.
1981ರಲ್ಲಿ ₹10 ಸಾವಿರ ಮೂಲ ಬಂಡವಾಳದೊಂದಿಗೆ ನಾರಾಯಣಮೂರ್ತಿ ಅವರು ಇನ್ಫೊಸಿಸ್ ಆರಂಭಿಸಿದರು. ಇದೀಗ ಈ ಕಂಪನಿಯು ದೇಶದ 2ನೇ ಅತಿ ದೊಡ್ಡ ಟೆಕ್ ಕಂಪನಿಯಾಗಿದೆ. ಸುಧಾಮೂರ್ತಿ ಅವರು ಆರಂಭದ ದಿನಗಳಲ್ಲಿ ಕಂಪನಿ ಕಾರ್ಯದಲ್ಲಿ ಪತಿಗೆ ನೆರವಾಗಿದ್ದರು. ನಂತರ ಇನ್ಫೊಸಿಸ್ ಪ್ರತಿಷ್ಠಾನವನ್ನು ಮುನ್ನಡೆಸಿದರು. 2021ರ ಡಿಸೆಂಬರ್‌ನಲ್ಲಿ ಅವರು ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಕುಟುಂಬ ನಡೆಸುತ್ತಿರುವ ಸ್ವಯಂಸೇವಾ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಅವರು ರಾಜ್ಯಸಭಾ ಸದಸ್ಯೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.