ಬೆಂಗಳೂರು: ಅನಾಮಧೇಯರ ಆರೋಪಗಳ ಕುರಿತು ಕಂಪನಿಯ ಸ್ವತಂತ್ರ ತನಿಖೆ ಪೂರ್ಣಗೊಂಡಿದ್ದು, ಹಣಕಾಸು ಅವ್ಯವಹಾರ ಅಥವಾ ಕಂಪನಿಯ ಉನ್ನತ ಅಧಿಕಾರಿಗಳು ಲೆಕ್ಕಪತ್ರಗಳಲ್ಲಿ ನ್ಯಾಯಬಾಹಿರ ವಿಧಾನಗಳನ್ನು ಅನುಸರಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಇನ್ಫೊಸಿಸ್ ತಿಳಿಸಿದೆ.
ಕಂಪನಿಯ ಸಿಇಒ ಸಲೀಲ್ ಪಾರೇಖ್ ಅವರು ಈಗ ತಮ್ಮ ಮೇಲಿನ ಆರೋಪಗಳಿಂದ ಮುಕ್ತರಾಗಿದ್ದಾರೆ.
‘ನಿರ್ದೇಶಕ ಮಂಡಳಿಯ ಲೆಕ್ಕಪತ್ರ ಸಮಿತಿಯು, ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿತ್ತು. ಕಾನೂನು ಸಲಹಾ ಸಂಸ್ಥೆಗಳಾದ ಶಾರ್ದೂಲ್ ಅಮರ್‌ಚಂದ್ ಮಂಗಲದಾಸ್ ಆ್ಯಂಡ್ ಕಂಪನಿ ಮತ್ತು ಪ್ರೈಸ್ ವಾಟರ್‌ಹೌಸ್ ಕೂಪರ್ಸ್ ನೆರವು ಪಡೆದು ಸಮಗ್ರವಾಗಿ ತನಿಖೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ’ ಎಂದು ಲೆಕ್ಕಪತ್ರ ಸಮಿತಿ ಅಧ್ಯಕ್ಷ ಡಿ. ಸುಂದರಂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲಾಭ ಹೆಚ್ಚಿಸಲು ಕಂಪನಿಯ ಉನ್ನತ ಅಧಿಕಾರಿಗಳು ನ್ಯಾಯಬಾಹಿರ ವಿಧಾನಗಳನ್ನು ಅನುಸರಿಸಿದ್ದಾರೆಂದು ಅನಾಮಧೇಯರು ದೂರು ನೀಡಿರುವುದನ್ನು ಕಂಪನಿಯು ಅಕ್ಟೋಬರ್‌ನಲ್ಲಿ ಷೇರುಪೇಟೆಯ ಗಮನಕ್ಕೆ ತಂದಿತ್ತು.
ನಿವ್ವಳ ಲಾಭ₹ 4,466 ಕೋಟಿ
ದೇಶದ ಎರಡನೇ ಅತಿದೊಡ್ಡ ಐ.ಟಿ ಸೇವಾ ಸಂಸ್ಥೆಯಾಗಿರುವ ಇನ್ಫೊಸಿಸ್, ಡಿಸೆಂಬರ್ ತ್ರೈಮಾಸಿಕದಲ್ಲಿ ₹ 4,466 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.
ವರ್ಷದ ಹಿಂದಿನ ₹ 3,610 ಕೋಟಿ ಲಾಭಕ್ಕೆ ಹೋಲಿಸಿದರೆ, ಈ ಬಾರಿ ಶೇ 23.7ರಷ್ಟು ಹೆಚ್ಚಳ ಸಾಧಿಸಿದೆ. ಕಂಪನಿಯ ವರಮಾನವು ಹಿಂದಿನ ವರ್ಷದ ಈ ಅವಧಿಯಲ್ಲಿನ ₹ 21,400 ಕೋಟಿಗಳಿಗೆ ಹೋಲಿಸಿದರೆ ಈ ಬಾರಿ ಶೇ 7.9ರಷ್ಟು ಏರಿಕೆ ಕಂಡು ₹ 23,092 ಕೋಟಿಗೆ ತಲುಪಿದೆ.
2019–20ನೇ ಹಣಕಾಸು ವರ್ಷದ ವರಮಾನ ಮುನ್ನೋಟವನ್ನು ಕಂಪನಿಯು ಅಕ್ಟೋಬರ್‌ನಲ್ಲಿನ ಅಂದಾಜಿಸಿದ್ದ ಶೇ 9ರಿಂದ ಶೇ 10ರಿಂದ, ಶೇ 10 ರಿಂದ ಶೇ 10.5ಕ್ಕೆ ಹೆಚ್ಚಿಸಿದೆ.
‘ಗ್ರಾಹಕರ ಜತೆಗಿನ ನಮ್ಮ ಬಾಂಧವ್ಯ ಸುಸ್ಥಿರ ರೀತಿಯಲ್ಲಿ ವೃದ್ಧಿಯಾಗುತ್ತಿದೆ. ಕಂಪನಿಯ ವಹಿವಾಟು ಎರಡಂಕಿ ಪ್ರಗತಿ ದಾಖಲಿಸಿರುವುದರಲ್ಲಿ ಇದು ಪ್ರತಿಫಲನಗೊಂಡಿದೆ. ಡಿಜಿಟಲ್ ಬದಲಾವಣೆ ಕಾಲಘಟ್ಟದಲ್ಲಿ ಗ್ರಾಹಕರು ಕಂಪನಿ ಜತೆಗೆ ನಿರಂತರವಾಗಿ ಇರಲಿದ್ದಾರೆ’ ಎಂದು ಸಿಇಒ ಸಲೀಲ್ ಪಾರೇಖ್ ಹೇಳಿದ್ದಾರೆ.
‘ಈ ವರ್ಷ ದೊಡ್ಡ ಮೊತ್ತದ ಒಪ್ಪಂದಗಳು ಶೇ 56ರಷ್ಟು ಪ್ರಗತಿ ಸಾಧಿಸಿವೆ. ಕಂಪನಿ ತೊರೆಯುವ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿಕೆಯಾಗಿದೆ’ ಎಂದು ಸಿಒಒ ಪ್ರವೀಣ್ ರಾವ್ ಹೇಳಿದ್ದಾರೆ.
ಅಂಕಿ ಅಂಶ
23.7 %
ನಿವ್ವಳ ಲಾಭದಲ್ಲಿನ ಹೆಚ್ಚಳ
7.9 %
ವರಮಾನದಲ್ಲಿನ ಏರಿಕೆ
10–10.5 %
ಹಣಕಾಸು ವರ್ಷಕ್ಕೆ ವರಮಾನ ಹೆಚ್ಚಳದ ನಿರೀಕ್ಷೆ
2,43,454
ಕಂಪನಿ ಉದ್ಯೋಗಿಗಳ ಸಂಖ್ಯೆ
* ಸಲೀಲ್ ಪಾರೇಖ್ ಮತ್ತು ನೀಲಾಂಜನ ರಾಯ್ ಅವರು ಕಂಪನಿಯ ಹೆಮ್ಮೆಯ ಪರಂಪರೆಯ ಸಮರ್ಥ ಕಾವಲುಗಾರರಾಗಿದ್ದಾರೆ
-ನಂದನ್ ನಿಲೇಕಣಿ,ಇನ್ಫೊಸಿಸ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.