ನವದೆಹಲಿ: ಭಾರತದ ಎರಡನೆಯ ಅತಿದೊಡ್ಡ ಐ.ಟಿ. ಸೇವಾ ಕಂಪನಿಯಾಗಿರುವ ಇನ್ಫೊಸಿಸ್ ತನ್ನ ನೌಕರರ ವೇತನ ಹೆಚ್ಚಳ ಮಾಡಲಿದೆ, ಅವರಿಗೆ ಬಡ್ತಿ ನೀಡಲಿದೆ. ಇದನ್ನು 2021ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೆ ತರಲಿದೆ.
ಎರಡನೆಯ ತ್ರೈಮಾಸಿಕಕ್ಕೆ ಅನ್ವಯ ವಾಗುವಂತೆ ನೌಕರರಿಗೆ ವಿಶೇಷ ಭತ್ಯೆ ನೀಡಲಿದೆ. ಹಾಗೆಯೇ, ಅವರಿಗೆ ಶೇಕಡ 100ರಷ್ಟು ವೇರಿಯೇಬಲ್ ಪೇ ಕೂಡ ನೀಡಲಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಕಂಪನಿಯಲ್ಲಿ ಸೆಪ್ಟೆಂಬರ್ ವೇಳೆಗೆ ಒಟ್ಟು 2.40 ಲಕ್ಷ ನೌಕರರು ಇದ್ದರು.
‘ಈ ಸಂದರ್ಭದಲ್ಲಿ ನಮ್ಮ ನೌಕರರ ಬದ್ಧತೆಯನ್ನು ಗುರುತಿಸಿ ಅವರಿಗೆ ಶೇಕಡ 100ರಷ್ಟು ವೇರಿಯೇಬಲ್ ಪೇ ನೀಡುತ್ತಿದ್ದೇವೆ. ಕಿರಿಯ ನೌಕರರಿಗೆ ಮೂರನೆಯ ತ್ರೈಮಾಸಿಕದಲ್ಲಿ ವಿಶೇಷ ಭತ್ಯೆಯನ್ನು ನೀಡಲಿದ್ದೇವೆ’ ಎಂದು ಕಂಪನಿಯ ಸಿಇಒ ಸಲೀಲ್ ಪಾರೇಖ್ ಹೇಳಿದ್ದಾರೆ.
‘ನಮ್ಮ ಕಿರಿಯ ನೌಕರರಿಗೆ ಬಡ್ತಿ ನೀಡುವುದನ್ನು ನಾವು ಹಿಂದಿನ ತ್ರೈಮಾಸಿಕದಲ್ಲಿಯೇ ಮತ್ತೆ ಆರಂಭ ಮಾಡಿದ್ದೇವೆ. ಈಗ ಎಲ್ಲ ಹಂತಗಳಲ್ಲಿ ಇರುವ ನೌಕರರಿಗೂ ಇದನ್ನು ವಿಸ್ತರಿಸಲಾಗುವುದು’ ಎಂದು ಪಾರೇಖ್ ಹೇಳಿದ್ದಾರೆ. ಕೋವಿಡ್–19 ಕಾರಣದಿಂದಾಗಿ, ಬಡ್ತಿ ನೀಡುವುದನ್ನು ತಡೆಹಿಡಿಯಲಾಗುವುದು ಎಂದು ಇನ್ಫೊಸಿಸ್ ಈ ಹಿಂದೆ ಹೇಳಿತ್ತು.
ಹಿಂದಿನ ವರ್ಷಗಳಲ್ಲಿ ಮಾಡಿದ್ದ ರೀತಿಯಲ್ಲೇ ಈ ಬಾರಿಯೂ ವೇತನ ಹೆಚ್ಚಳ ಮಾಡಲಾಗುವುದು ಎಂದು ಕಂಪನಿಯ ಸಿಒಒ ಪ್ರವೀಣ್ ರಾವ್ ಹೇಳಿದ್ದಾರೆ. ಹಿಂದಿನ ವರ್ಷ ಕಂಪನಿಯು ಸರಾಸರಿ ಶೇ 6ರಷ್ಟು ವೇತನ ಹೆಚ್ಚಳ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.