ADVERTISEMENT

ವಯೋಮಿತಿ ರದ್ದುಪಡಿಸಿದ ಐಆರ್‌ಡಿಎಐ: 65 ವರ್ಷದ ನಂತರವೂ ವಿಮೆ ಲಭ್ಯ

ಪಿಟಿಐ
Published 21 ಏಪ್ರಿಲ್ 2024, 15:16 IST
Last Updated 21 ಏಪ್ರಿಲ್ 2024, 15:16 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಹೊಸದಾಗಿ ವಿಮಾ ಸೌಲಭ್ಯ ಪಡೆಯಲು ನಿಗದಿಪಡಿಸಿದ್ದ ಗರಿಷ್ಠ ವಯೋಮಿತಿಯನ್ನು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ರದ್ದುಪಡಿಸಿದೆ.

ಸದ್ಯ ವಯಸ್ಸಿನ ಮಿತಿಯನ್ನು ತೆಗೆದುಹಾಕಿರುವುದರಿಂದ 65 ವರ್ಷ ದಾಟಿದವರಿಗೂ ಇನ್ನು ಮುಂದೆ ಆರೋಗ್ಯ ವಿಮಾ ಸೌಲಭ್ಯ ಲಭಿಸಲಿದೆ. ವಿಮಾ ಕ್ಷೇತ್ರದ ವಿಸ್ತರಣೆ ಹಾಗೂ ಹೆಚ್ಚುತ್ತಿರುವ ಆರೋಗ್ಯ ವೆಚ್ಚದ ದೃಷ್ಟಿಯಿಂದ ಪ್ರಾಧಿಕಾರವು ಈ ನಿರ್ಧಾರ ಕೈಗೊಂಡಿದೆ.  

ವಿಮಾ ವಲಯದಲ್ಲಿ ಹೆಚ್ಚು ಜನರ ಸೇರ್ಪಡೆ ಹಾಗೂ ಆರೋಗ್ಯ ರಕ್ಷಣಾ ಸೌಲಭ್ಯವನ್ನು ಎಲ್ಲರಿಗೂ ಕೈಗೆಟಕುವಂತೆ ಮಾಡುವುದೇ ಇದರ ಹಿಂದಿರುವ ಉದ್ದೇಶವಾಗಿದೆ. ಅನಿರೀಕ್ಷಿತವಾಗಿ ಹೆಚ್ಚಳವಾಗುವ ವೈದ್ಯಕೀಯ ವೆಚ್ಚದಿಂದಾಗಿ ಬಾಳಿನ ಮುಸ್ಸಂಜೆಯಲ್ಲಿರುವ ವೃದ್ಧರು ತೀವ್ರ ತೊಂದರೆಗೆ ಸಿಲುಕುತ್ತಿದ್ದರು. ಈ ತೊಂದರೆ ತಪ್ಪಿಸಲು ಈ ತೀರ್ಮಾನ ಕೈಗೊಂಡಿದೆ.

ADVERTISEMENT

‘ಹಳೆಯ ಮಾರ್ಗಸೂಚಿ ಅನ್ವಯ ಹೊಸ ವಿಮಾ ಪಾಲಿಸಿ ಖರೀದಿಗೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿತ್ತು. ಇತ್ತೀಚೆಗೆ ವಿಮಾ ಕಾಯ್ದೆಗೆ ತಂದಿರುವ ತಿದ್ದುಪಡಿ ಅನ್ವಯ ಇದನ್ನು ರದ್ದುಪಡಿಸಲಾಗಿದೆ. ಏಪ್ರಿಲ್‌ 1ರಿಂದಲೇ ಈ ಹೊಸ ನಿಯಮಾವಳಿಯು ಜಾರಿಗೆ ಬಂದಿದೆ. ಯಾವುದೇ ವಯಸ್ಸನ್ನು ಲೆಕ್ಕಿಸದೆ ಹೊಸದಾಗಿ ವಿಮೆಯನ್ನು ಖರೀದಿಸಬಹುದಾಗಿದೆ’ ಎಂದು ಐಆರ್‌ಡಿಎಐ ತಿಳಿಸಿದೆ.

‘ವಿಮಾ ಕಂಪನಿಗಳು ಎಲ್ಲಾ ವಯೋಮಾನದವರಿಗೂ ವಿಮಾ ಸೌಲಭ್ಯವನ್ನು ಒದಗಿಸುತ್ತವೆಯೇ ಎಂಬ ಬಗ್ಗೆ ಪಾಲಿಸಿದಾರರು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಮಕ್ಕಳು, ಹೆರಿಗೆ ಹಾಗೂ ಸಕ್ಷಮ ಪ್ರಾಧಿಕಾರ ಸೂಚಿಸಿರುವ ಇತರೆ ಗುಂಪಿನ ಸದಸ್ಯರಿಗೂ ಕಂಪನಿಗಳು ವಿಮಾ ಸೌಲಭ್ಯವನ್ನು ನೀಡಬಹುದಾಗಿದೆ’ ಎಂದು ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದರ ಹೊರತಾಗಿ ಪೂರ್ವ ಅಸ್ತಿತ್ವದಲ್ಲಿ ಇಲ್ಲದ ಆರೋಗ್ಯ ಸಮಸ್ಯೆಗಳಿಗೂ ಕಂಪನಿಗಳು ಪಾಲಿಸಿಗಳನ್ನು ನೀಡಬಹುದಾಗಿದೆ ಎಂದು ಹೇಳಿದೆ.

ಕ್ಯಾನ್ಸರ್‌, ಹೃದ್ರೋಗ, ಮೂತ್ರಪಿಂಡ ಸಮಸ್ಯೆ ಮತ್ತು ಏಡ್ಸ್‌ ರೋಗದಿಂದ ಬಳಲುತ್ತಿರುವವರಿಗೂ ವಿಮಾ ಪಾಲಿಸಿ ನೀಡುವುದನ್ನು ಕಂಪನಿಗಳು ನಿರಾಕರಿಸುವಂತಿಲ್ಲ ಎಂದು ಸೂಚಿಸಿದೆ.

ಕಂತುಗಳ ರೂಪದಲ್ಲಿ ಪ್ರೀಮಿಯಂ ಮೊತ್ತ ಪಾವತಿಸಲು ಪಾಲಿಸಿದಾರರಿಗೆ ಕಂಪನಿಗಳು ಅವಕಾಶ ನೀಡಬೇಕಿದೆ ಎಂದು ತಿಳಿಸಿದೆ.

ಆಯುಷ್ ಚಿಕಿತ್ಸಾ ವೆಚ್ಚಕ್ಕೆ ಯಾವುದೇ ಮಿತಿ ಇಲ್ಲ. ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ಪದ್ಧತಿ ಅಡಿಯಲ್ಲಿ ನೀಡುವ ಚಿಕಿತ್ಸೆಗಳಿಗೆ ಯಾವುದೇ ಮಿತಿ ನಿಗದಿಪಡಿಸುವಂತಿಲ್ಲ. ಸಂಪೂರ್ಣ ವಿಮಾ ಕವರೇಜ್ ಅನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.