ADVERTISEMENT

ಜಿಎಸ್‌ಟಿಗೆ ಇಂಧನ | ಕೇಂದ್ರದ ಅಭ್ಯಂತರವಿಲ್ಲ: ನಿರ್ಮಲಾ ಪ್ರತಿಪಾದನೆ

ರಾಜ್ಯಗಳ ನಡುವೆ ಒಮ್ಮತ ಅಗತ್ಯ: ನಿರ್ಮಲಾ ಪ್ರತಿಪಾದನೆ

ಪಿಟಿಐ
Published 22 ಜೂನ್ 2024, 16:18 IST
Last Updated 22 ಜೂನ್ 2024, 16:18 IST
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದಿಂದ ಯಾವುದೇ ಅಭ್ಯಂತರವಿಲ್ಲ. ಆದರೆ, ಈ ಕುರಿತು ಎಲ್ಲಾ ರಾಜ್ಯಗಳು ಒಮ್ಮತದ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ಎಂಟು ತಿಂಗಳ ಬಳಿಕ ಶನಿವಾರ ನಡೆದ ಜಿಎಸ್‌ಟಿ ಮಂಡಳಿಯ 53ನೇ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರು ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿ ಇದಕ್ಕೆ ಅವಕಾಶ ಕಲ್ಪಿಸಿದ್ದಾರೆ. ರಾಜ್ಯಗಳು ಪರಸ್ಪರ ಚರ್ಚಿಸಬೇಕಿದೆ’ ಎಂದರು.

ADVERTISEMENT

ರಾಜ್ಯಗಳು ಒಪ್ಪಿಗೆ ನೀಡಿದ ತಕ್ಷಣವೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ವಿಷಯ ಮಂಡಿಸಲಾಗುವುದು. ಬಳಿಕ ಯಾವ ಹಂತದ ತೆರಿಗೆ ವ್ಯಾಪ್ತಿಗೆ ಸೇರಿಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

- ಯಾವುದಕ್ಕೆ ತೆರಿಗೆ ರಿಯಾಯಿತಿ?

* ರೈಲ್ವೆ ಪ್ಲ್ಯಾಟ್‌ಫಾರ್ಮ್‌ ಟಿಕೆಟ್‌ ನಿರೀಕ್ಷಣಾ ಕೊಠಡಿ ಸೇವೆ ವಿದ್ಯುತ್‌ಚಾಲಿತ ವಾಹನಗಳು ಮತ್ತು ಇಂಟ್ರಾ ರೈಲ್ವೆ ಸೇವೆಗೆ ವಿನಾಯಿತಿ ನೀಡಲಾಗಿದೆ

* ಶಿಕ್ಷಣ ಸಂಸ್ಥೆಗಳು ಹೊರಭಾಗದಲ್ಲಿ ಕಲ್ಪಿಸುವ ಹಾಸ್ಟೆಲ್ ಸೌಕರ್ಯ ಪಡೆಯುವ ಪ್ರತಿ ವಿದ್ಯಾರ್ಥಿಗೆ ಮಾಸಿಕ ₹20 ಸಾವಿರದವರೆಗೆ ವಿನಾಯಿತಿ ಸಿಗಲಿದೆ. ವಿದ್ಯಾರ್ಥಿಯು 90 ದಿನಗಳ ಕಾಲ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಇರಬೇಕು ಎಂಬ ಷರತ್ತು ವಿಧಿಸಲಾಗಿದೆ

* ರಟ್ಟಿನ ಪೆಟ್ಟಿಗೆಗಳಿಗೆ ನಿಗದಿಪಡಿಸಿದ್ದ ತೆರಿಗೆಯನ್ನು ಶೇ 18ರಷ್ಟು ಶೇ 12ಕ್ಕೆ ಇಳಿಸಲಾಗಿದೆ

* ಹಾಲಿನ ಕ್ಯಾನ್‌ಗಳ ಮೇಲೆ ವಿಧಿಸುವ ತೆರಿಗೆಯಲ್ಲಿ ಏಕರೂಪತೆ ಕಾಯ್ದುಕೊಳ್ಳಲು ನಿರ್ಧರಿಸಿದ್ದು ಶೇ 12ರಷ್ಟು ತೆರಿಗೆ ನಿಗದಿಪಡಿಸಲಾಗಿದೆ

* ನಕಲಿ ಇನ್‌ವಾಯ್ಸ್‌ಗಳ ಪ್ರಮಾಣ ಕಡಿಮೆಗೊಳಿಸಲು ಸೂಕ್ತ ಕ್ರಮಕ್ಕೆ ಮಂಡಳಿ ನಿರ್ಧಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.