ADVERTISEMENT

₹1.10 ಲಕ್ಷ ಕೋಟಿ GST ಬಾಕಿ: ಆನ್‌ಲೈನ್‌ ಗೇಮಿಂಗ್‌ ಕಂಪನಿಗಳಿಗೆ ಷೋಕಾಸ್‌ ನೋಟಿಸ್

ಪಿಟಿಐ
Published 15 ಸೆಪ್ಟೆಂಬರ್ 2024, 14:11 IST
Last Updated 15 ಸೆಪ್ಟೆಂಬರ್ 2024, 14:11 IST
<div class="paragraphs"><p>ಜಿಎಸ್‌ಟಿ&nbsp;&nbsp;</p></div>

ಜಿಎಸ್‌ಟಿ  

   

ನವದೆಹಲಿ: ಕೇಂದ್ರ ಸರ್ಕಾರವು ಆನ್‌ಲೈನ್‌ ಗೇಮಿಂಗ್‌ ಮೇಲೆ ಶೇ 28ರಷ್ಟು ಜಿಎಸ್‌ಟಿ ವಿಧಿಸಿದೆ. ಆದರೆ, ಹಲವು ಕಂಪನಿಗಳು ಇಷ್ಟು ಪ್ರಮಾಣದ ತೆರಿಗೆ ಪಾವತಿಗೆ ಹಿಂದೇಟು ಹಾಕಿರುವ ಬಗ್ಗೆ ಕೇಂದ್ರ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯದ (ಡಿಜಿಜಿಐ) ವಾರ್ಷಿಕ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. 

ದೇಶದಲ್ಲಿ ಒಟ್ಟು 118 ಆನ್‌ಲೈನ್‌ ಗೇಮಿಂಗ್‌ ಕಂಪನಿಗಳಿವೆ. ಈ ಪೈಕಿ 34 ಕಂಪನಿಗಳ ಮಾಲೀಕರು ₹1.10 ಲಕ್ಷ ಕೋಟಿ ಜಿಎಸ್‌ಟಿ ಬಾಕಿ ಉಳಿಸಿಕೊಂಡಿದ್ದು, ಎಲ್ಲರಿಗೂ ಷೋಕಾಸ್‌ ನೋಟಿಸ್‌ ನೀಡಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಐಸಿ) ತಿಳಿಸಿದೆ.

ADVERTISEMENT

ಸಕಾಲದಲ್ಲಿ ಗೇಮಿಂಗ್‌ ಕಂಪನಿಗಳು ಜಿಎಸ್‌ಟಿ ಪಾವತಿಸುತ್ತಿಲ್ಲ. ಹಾಗಾಗಿ, ಇವುಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಸಂಬಂಧ ಜಾರಿ ನಿರ್ದೇಶನಾಲಯ, ಆರ್‌ಬಿಐ, ಆದಾಯ ತೆರಿಗೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಒಳಗೊಂಡ ಅಂತರ ಇಲಾಖಾ ಸಮಿತಿ ರಚನೆಗೂ ಮಂಡಳಿ ತೀರ್ಮಾನಿಸಿದೆ.

ವಿದೇಶದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಭಾರತದಲ್ಲಿ ಕಾರ್ಯಾಚರಣೆ ನಡೆಸುವ 658 ಆನ್‌ಲೈನ್‌ ಗೇಮಿಂಗ್‌ ಕಂಪನಿಗಳನ್ನು ಡಿಜಿಜಿಐ ಪತ್ತೆ ಹೆಚ್ಚಿದೆ. ಈ ಕಂಪನಿಗಳು ಭಾರತದಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಜೊತೆಗೆ, ದೇಶದ ಕಾನೂನು ಪಾಲನೆಯನ್ನೂ ಮಾಡುತ್ತಿಲ್ಲ. ಅಲ್ಲದೆ, 167 ಯುಆರ್‌ಎಲ್‌/ವೆಬ್‌ಸೈಟ್‌ಗಳ ಕಾರ್ಯಾಚರಣೆಯ ಸ್ಥಗಿತಕ್ಕೂ ಸೂಚನೆ ನೀಡಿದೆ. 

ಆನ್‌ಲೈನ್‌ ಗೇಮಿಂಗ್‌ ವಲಯವು ಜಿಎಸ್‌ಟಿ ವಂಚನೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಡಿಜಿಜಿಐ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಹಣ ಅಕ್ರಮ ವರ್ಗಾವಣೆ, ಸೈಬರ್‌ ಅಪರಾಧ, ಬಾಲಾಪರಾಧ, ಸಾಮಾಜಿಕ ಹಾಗೂ ಆರ್ಥಿಕ ಅಪರಾಧ ಚಟುವಟಿಕೆಗಳು ಈ ವಲಯದಲ್ಲಿ ಹೆಚ್ಚು ನಡೆಯುತ್ತವೆ ಎಂದು ಹೇಳಿದೆ.

ಆನ್‌ಲೈನ್‌ ಗೇಮಿಂಗ್‌

ವಿದೇಶಿ ಕಂಪನಿ ಪತ್ತೆ ಕಷ್ಟಕರ

2023ರ ಅಕ್ಟೋಬರ್‌ 1ರಿಂದ ಆನ್‌ಲೈನ್‌ ಗೇಮಿಂಗ್‌ ವಲಯವನ್ನು  ಜಿಎಸ್‌ಟಿಯ ಶೇ 28ರಷ್ಟು ತೆರಿಗೆ ದರದ ವ್ಯಾಪ್ತಿಗೆ ತರಲಾಗಿದೆ. ಬಹಳಷ್ಟು ಕಂಪನಿಗಳು ವಿದೇಶದಿಂದ ಕಾರ್ಯಾಚರಣೆ ನಡೆಸುತ್ತವೆ (ಉದಾಹರಣೆಗೆ ಮಾಲ್ಟಾ ಕುರಾಕೊ ಐಲ್ಯಾಂಡ್‌ ಬ್ರಿಟಿಷ್ ವರ್ಜಿನ್ ಐಲ್ಯಾಂಡ್‌ ಸೈಪ್ರೆಸ್ ಇತ್ಯಾದಿ). ಇವುಗಳ ಮಾಲೀಕರನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ ಎಂದು ಡಿಜಿಜಿಐ ತಿಳಿಸಿದೆ.

ತೆರಿಗೆ ತ‍‍ಪ್ಪಿಸಿಕೊಳ್ಳಲು ಆನ್‌ಲೈನ್‌ ಗೇಮಿಂಗ್‌ ವೇದಿಕೆಗಳು ಯುಆರ್‌ಎಲ್‌/ವೆಬ್‌ಸೈಟ್‌/ಆ್ಯಪ್‌ಗಳನ್ನು ಬದಲಾವಣೆ ಮಾಡುತ್ತಿರುತ್ತವೆ. ಡಾರ್ಕ್‌ವೆಬ್‌ ಅಥವಾ ವಿಪಿಎನ್‌ ಬಳಸುವ ವೇದಿಕೆಗಳನ್ನು ತೆರಿಗೆ ಕಾನೂನಿನ ವ್ಯಾಪ್ತಿಗೆ ಒಳಪಡಿಸುವುದು ಕಷ್ಟಕರವಾಗಿದೆ ಎಂದು ಹೇಳಿದೆ.

ತೆರಿಗೆ ವಂಚನೆ ಎಸಗುತ್ತಿರುವ ಈ ಕಂಪನಿಗಳ ವಿರುದ್ಧ ಸಮಗ್ರ ಕಾರ್ಯತಂತ್ರ ರೂಪಿಸುವ ಭಾಗವಾಗಿ ಅಂತರ ಇಲಾಖೆಗಳನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಗ್ರಾಹಕರ ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.