ನವದೆಹಲಿ: ‘ರೆಪೊ ದರ ಕಡಿತಕ್ಕೆ ಇನ್ನೂ ಕಾಲ ಪಕ್ಷವಾಗಿಲ್ಲ. ಸದ್ಯ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಈ ಹಂತದಲ್ಲಿ ಬಡ್ಡಿದರ ಕಡಿತದ ನಿರ್ಧಾರ ಕೈಗೊಳ್ಳುವುದು ಬಹಳ ಅಪಾಯಕಾರಿಯಾಗಲಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಬ್ಲೂಮ್‌ಬರ್ಗ್‌ನಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸದ್ಯ ಹಣದುಬ್ಬರವು ಶೇ 5.50ರಷ್ಟಿದೆ. ಇದು ಮುಂದಿನ ತಿಂಗಳುಗಳಲ್ಲಿಯೂ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಹೇಳಿದರು.
ಮುಂಬರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರ ಕಡಿತದ ಬಗ್ಗೆ ಯಾವುದೇ ಸುಳಿವು ನೀಡಲು ನಿರಾಕರಿಸಿದ ಅವರು, ‘ಆರ್ಥಿಕತೆಯ ಮುನ್ನೋಟ ಆಧಾರದ ಮೇಲೆ ಎಂಪಿಸಿ ಸಭೆಯ ನಿಲುವು ಬದಲಾಗಲಿದೆ’ ಎಂದು ಹೇಳಿದರು.
ಈ ತಿಂಗಳ ಮೊದಲ ವಾರದಲ್ಲಿ ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಮುಂದಿನ ಎಂಪಿಸಿ ಸಭೆಯು ಡಿಸೆಂಬರ್ 4ರಿಂದ 6ರ ವರೆಗೆ ನಡೆಯಲಿದೆ.
ನಿರ್ಬಂಧ: ಸಚಿನ್ ಬನ್ಸಾಲ್ ಅವರ ನವಿ ಫಿನ್‌ಸರ್ವ್ ಹಾಗೂ ಮೂರು ಬ್ಯಾಂಕೇತರ ಹಣಕಾಸು ಕಂಪನಿಗಳ ವಹಿವಾಟಿಗೆ ಇದೇ 21ರಿಂದ ಆರ್‌ಬಿಐ ನಿರ್ಬಂಧ ವಿಧಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ದಾಸ್ ಅವರು, ‘ಆರ್‌ಬಿಐ ಪೊಲೀಸ್ ಅಲ್ಲ. ನಾವು ಎಲ್ಲವನ್ನೂ ಕೂಲಂಕಷವಾಗಿ ಗಮನಿಸುತ್ತಿರುತ್ತೇವೆ. ಹಣಕಾಸು ಮಾರುಕಟ್ಟೆ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟಿರುತ್ತೇವೆ. ಅಗತ್ಯವಿದ್ದಾಗ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.