ADVERTISEMENT

ಆರ್‌ಬಿಐ ಬಡ್ಡಿ ದರ ಕಡಿತದ ಪರಿಣಾಮ: ಮನೆ ಖರೀದಿಗೆ ಬೇಡಿಕೆ ಹೆಚ್ಚಳ

ಪಿಟಿಐ
Published 7 ಫೆಬ್ರುವರಿ 2019, 18:45 IST
Last Updated 7 ಫೆಬ್ರುವರಿ 2019, 18:45 IST
   

ನವದೆಹಲಿ: ಅಲ್ಪಾವಧಿ ಬಡ್ಡಿ ದರ ಕಡಿತ ಮಾಡಿರುವ ಆರ್‌ಬಿಐನ ನಿರ್ಧಾರವು, ಗೃಹ ನಿರ್ಮಾಣ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಲಿದೆ ಎಂದು ರಿಯಲ್‌ ಎಸ್ಟೇಟ್‌ ವಲಯದ ಸಂಸ್ಥೆಗಳು ಮತ್ತು ಸಲಹಾ ಸಂಸ್ಥೆಗಳು ಅಂದಾಜಿಸಿವೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಮತ್ತು ಗೃಹ ಹಣಕಾಸು ಸಂಸ್ಥೆಗಳ ನಗದು ಪರಿಸ್ಥಿತಿ ಸುಧಾರಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ ಎನ್ನುವ ಆಗ್ರಹವೂ ಈ ವಲಯದಿಂದ ವ್ಯಕ್ತವಾಗಿದೆ.

‘ಬಡ್ಡಿ ದರ ಕಡಿತದ ಫಲವಾಗಿ ಸಾಲದ ಮಾಸಿಕ ಸಮಾನ ಕಂತುಗಳ (ಇಎಂಐ) ಹೊರೆ ಇಳಿಯುವುದರಿಂದ ಜನರು ಮನೆಗಳ ಖರೀದಿಗೆ ಒಲವು ತೋರಲಿದ್ದಾರೆ’ ಎಂದು ಭಾರ­ತೀಯ ರಿಯಲ್‌ ಎಸ್ಟೇಟ್‌ ನಿರ್ಮಾಣ­ಗಾ­ರರ ಸಂಘಗಳ ಒಕ್ಕೂಟದ (ಕ್ರೆಡಾಯ್‌) ರಾಷ್ಟ್ರೀಯ ಅಧ್ಯಕ್ಷ ಜಕ್ಸಯ್‌ ಶಾ ಹೇಳಿದ್ದಾರೆ.

ADVERTISEMENT

‘ಚೇತರಿಕೆ ಹಾದಿಯಲ್ಲಿ ಇರುವ ಗೃಹ ನಿರ್ಮಾಣ ಮಾರುಕಟ್ಟೆಗೆ ಆರ್‌ಬಿಐ ನಿರ್ಧಾರವು ಇನ್ನಷ್ಟು ಉತ್ತೇಜನ ನೀಡಲಿದೆ’ ಎಂದು ಜೆಎಲ್‌ಎಲ್‌ ಇಂಡಿಯಾದ ಸಿಇಒ ರಮೇಶ್‌ ನಾಯರ್‌ ಅಭಿಪ್ರಾಯಪಟ್ಟಿದ್ದಾರೆ.

ಉದ್ದಿಮೆಯ ಸ್ವಾಗತ: ಆರ್‌ಬಿಐನ ನಿರ್ಧಾರವು ಬ್ಯಾಂಕ್‌ಗಳು ವಿವಿಧ ಸಾಲಗಳ ಮೇಲಿನ ಬಡ್ಡಿ ದರ ತಗ್ಗಿಸಲು ಉತ್ತೇಜನ ನೀಡಲಿದೆ. ಇದರಿಂದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಲಿದ್ದು ಆರ್ಥಿಕತೆಗೆ ಚೇತರಿಕೆ ಸಿಗಲಿದೆ ಎಂದು ದೇಶಿ ಉದ್ದಿಮೆ ವಲಯ ನಿರೀಕ್ಷಿಸಿದೆ.

‘ಬಡ್ಡಿ ದರ ಕಡಿತ ನಿರ್ಧಾರವು ಸರಿಯಾದ ದಿಕ್ಕಿನಲ್ಲಿ ಸಾಗುವ ನಿರ್ಧಾರವಾಗಿದೆ. ಕೈಗಾರಿಕೋದ್ಯಮಿ ಮತ್ತು ಉದ್ದಿಮೆದಾರರ ಉತ್ಸಾಹ ಹೆಚ್ಚಿಸಲಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ರಾಕೇಶ್‌ ಭಾರ್ತಿ ಮಿತ್ತಲ್‌
ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.