ನವದೆಹಲಿ: ಭಾರತದಲ್ಲಿ 2026ರ ವೇಳೆಗೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆ ಆರಂಭಿಸುವ ಯೋಜನೆ ಹೊಂದಿರುವುದಾಗಿ ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್ ಗುರುವಾರ ಹೇಳಿದೆ.
ವರ್ಟಿಕಲ್ ಟೇಕಾಫ್ ಆ್ಯಂಡ್ ಲ್ಯಾಂಡಿಂಗ್ (ವಿಟಿಒಎಲ್) ಏರ್‌ಕ್ರಾಫ್ಟ್‌ಗಳನ್ನು ತಯಾರಿಸುವ ಅಮೆರಿಕದ ಆರ್ಚರ್ ಕಂಪನಿಯ ಜೊತೆಗೂಡಿ ಈ ಸೇವೆ ಆರಂಭಿಸಲು ಉದ್ದೇಶಿಸಲಾಗಿದೆ. ಸೇವೆ ಆರಂಭ ಆದ ಬಳಿಕ, ದೆಹಲಿಯ ಕನೌಟ್ ಸ್ಥಳದಿಂದ ಹರಿಯಾಣದ ಗುರುಗ್ರಾಮಕ್ಕೆ 7 ನಿಮಿಷದಲ್ಲಿ ಪ್ರಯಾಣಿಕರನ್ನು ತಲುಪಿಸಲಾಗುವುದು. 27 ಕಿಲೋ ಮೀಟರಿನ ರಸ್ತೆ ಮಾರ್ಗದಲ್ಲಿ ಅಲ್ಲಿಗೆ ತಲುಪಲು 60 ರಿಂದ 90 ನಿಮಿಷಗಳು ಬೇಕಾಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಇಂಟರ್‌ಗ್ಲೋಬ್ ಭಾರತದಲ್ಲಿ ವಿಮಾನಯಾನ, ಆತಿಥ್ಯ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಸೇವೆಗಳನ್ನು ನೀಡುತ್ತಿರುವ ಪ್ರಮುಖ ಕಂಪನಿ ಆಗಿದೆ. ಇಂಡಿಗೊ ವಿಮಾನಯಾನ ಕಂಪನಿಯು ಇದರ ಭಾಗವಾಗಿದೆ
ಇಂಟರ್‌ಗ್ಲೋಬ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ ಮತ್ತು ಆರ್ಚರ್ ಸಿಇಒ ನಿಖಿಲ್ ಗೋಯಲ್ ಅವರು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಆದರೆ, ಇದಕ್ಕೆ ಭಾರತದಲ್ಲಿ ನಿಯಂತ್ರಣ ಸಂಸ್ಥೆಗಳ ಒಪ್ಪಿಗೆಯ ಅಗತ್ಯ ಇದೆ.
ಭಾರತದಲ್ಲಿ ಕಾರ್ಯಾಚರಣೆ ನಡೆಸಲು ಆರ್ಚರ್ ಕಂಪನಿಯು 200 ಮಿಡ್‌ನೈಟ್ ಏರ್‌ಕ್ರಾಫ್ಟ್‌ಗಳನ್ನು ಖರೀದಿಸುವ ಯೋಜನೆ ಹೊಂದಲಾಗಿದೆ. ಮಿಡ್‌ನೈಟ್ ಏರ್‌ಕ್ರಾಫ್ಟ್ ನಾಲ್ಕು ಪ್ರಯಾಣಿಕರನ್ನು ಸಾಗಿಸಬಲ್ಲ ಇ–ಏರ್‌ಕ್ರಾಫ್ಟ್ ಆಗಿದೆ. ಸರಕುಸಾಗಣೆ, ವೈದ್ಯಕೀಯ ಮತ್ತು ತುರ್ತು ಸೇವೆಗಳನ್ನು ಸಹ ಆರಂಭಿಸುವ ಯೋಜನೆಯನ್ನು ಕಂಪನಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.